ಆದರ್ಶ ಬದುಕಿಗೆ ಗುರು ಕಾರುಣ್ಯ ಅವಶ್ಯಕ

ಬಾಳೆಹೊನ್ನೂರು: ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು ಬೇಕು. ಆದರ್ಶದ ಬದುಕಿಗೆ ಗುರು ಹಾಗೂ ಗುರಿ ಅವಶ್ಯಕ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಆಷಾಢ ಗುರು ಪೂರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಬೇಕು. ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ ತರುತ್ತದೆ. ಅಸತ್ಯದಿಂದ ಸತ್ಯದೆಡೆಗೆ ಅಜ್ಞಾನದಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆಸುವ ಗುರಿ ಗುರುವಿನದಾಗಿದೆ ಎಂದರು.

ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಗುರುವಿನ ಧರ್ಮ. ಸಂಸ್ಕಾರ ಬದುಕನ್ನು ಸುಸಂಸ್ಕೃತಗೊಳಿಸುತ್ತದೆ. ಜ್ಞಾನದ ಕಣ್ಣು ಶ್ರೀಗುರು. ಪರಶಿವನ ಪ್ರತಿ ರೂಪ ಶ್ರೀಗುರು ಎಂದು ಸಿದ್ಧಾಂತ ಶಿಖಾಮಣಿ ಸಾರಿ ಹೇಳಿದೆ. ಮಾನವತೆಯಿಂದ ದೈವತ್ವದೆಡೆಗೆ ಕರೆದೊಯ್ಯುವ ಗುರುವಿನ ಕಾರುಣ್ಯ ಮರೆಯಲಾಗದು ಎಂದು ಹೇಳಿದರು.

ಆಗಸ್ಟ್ ನ ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು. ಅಬ್ಬಿಗೇರಿ ಹಿರೇಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಳಗೇರಿ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲೆಬೆನ್ನೂರಿನ ಬಿ.ಎಂ. ನಂಜಯ್ಯ, ಬಸವಕಲ್ಯಾಣದ ಭಕ್ತರು, ಮಹಾರಾಷ್ಟ್ರ ರಾಜ್ಯದ ನಾಂದೇಡದ ಭಕ್ತರು ಗುರುಪಾದ ಪೂಜಾ ನೆರವೇರಿಸಿ ಆಶೀರ್ವಾದ ಪಡೆದರು.

ವಿಶೇಷ ಪೂಜೆ: ಗುರು ಪೌರ್ಣಿಮೆ ಪ್ರಯುಕ್ತ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಶ್ರೀ ಜಗದ್ಗುರುಗಳು ಇಷ್ಟಲಿಂಗಾರ್ಚನೆ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.