ಗುಡ್ಡದ ನೀರಿನಿಂದ ಜಮೀನಿಗೆ ಹಾನಿ

ಬಾಳೆಹೊನ್ನೂರು: ಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಗುಡ್ಡದಿಂದ ಧಾರಾಕಾರ ನೀರು ಹರಿದುಬರುತ್ತಿರುವುದರಿಂದ 25 ಎಕರೆಗೂ ಅಧಿಕ ಕೃಷಿ ಜಮೀನಿಗೆ ಹಾನಿಯಾಗಿದೆ. ನೀರು ಬಿದರೆಯ ರಾಜೇಶ್ವರಿ ಎಸ್ಟೇಟ್, ಸ್ವಾಮಿ, ಸತ್ಯಪ್ರಸಾದ್ ಅಜಿಲ್, ಸತೀಶ್ ಭಟ್ ಎಂಬುವವರ ಜಮೀನಿಗೆ ನೀರು ನುಗ್ಗಿದೆ. ನೀರು ನುಗ್ಗಿದ ರಭಸಕ್ಕೆ ಭೂಮಿ ಕುಸಿದಿದೆ. ಕೃಷಿ ಭೂಮಿಗಳಲ್ಲಿ ಕೆಸರು ಮಣ್ಣು, ಕಲ್ಲು, ಪೊದೆಗಳು ಬಂದು ನಿಂತಿವೆ. 25 ಎಕರೆಗೂ ಅಧಿಕ ಅಡಕೆ, ಕಾಫಿ, ಮೆಣಸು, ಏಲಕ್ಕಿ ಬೆಳೆಗೆ ಹಾನಿಯಾಗಿದೆ. ಗುಡ್ಡದ ನೀರು ಸ್ವಾಮಿ ಮತ್ತು ಅಜ್ಜೇಗೌಡ ಎಂಬುವರ ವಾಸದ ಮನೆಗೂ ನುಗ್ಗುವ ಸಾಧ್ಯತೆ ಇರುವುದರಿಂದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನೀರಿನ ಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ನಾಟಿ ಮಾಡಿರುವ ಭತ್ತದ ಗದ್ದೆಗಳಿಗೂ ನುಗ್ಗುವ ಅಪಾಯವಿದೆ.