ಹಾಸನ: ಹಸಿವು ಮನುಷ್ಯನನ್ನು ಯಾವ ಮಟ್ಟಕ್ಕೂ ಇಳಿಸುತ್ತದೆ. ಅದು ಹೊಟ್ಟೆಯ ಹಸಿವೇ ಆಗಿರಬೇಕಾಗಿಲ್ಲ. ಅರಿವು ಪಡೆಯಬೇಕು, ಶಿಕ್ಷಣ ಪಡೆಯಬೇಕು ಎಂಬ ಹಸಿವು ಕೂಡ..!
ಚನ್ನರಾಯಪಟ್ಟಣ ತಾಲೂಕು ಯಾಚೇನಹಳ್ಳಿಯಲ್ಲಿ ಯುವಕನೊಬ್ಬ ಬಾಳೆಗೊನೆ ಕಳವುಗೈದು ಸಿಕ್ಕಿಬಿದ್ದಿದ್ದ. ಕಳವುಗೈಯುವಾಗಲೇ ಸಿಕ್ಕಿಬಿದ್ದ ಯುವಕನಿಗೆ ಗ್ರಾಮಸ್ಥರಿಂದ ಸರಿಯಾಗಿ ಗೂಸಾ ಕೂಡ ಸಿಕ್ಕಿದೆ. ಹೀಗೆ ಕಳವುಗೈದು ಸಿಕ್ಕಿ ಬಿದ್ದ ಯುವಕನನ್ನು ಗ್ರಾಮಸ್ಥರು ಹಗ್ಗದಿಂದ ಕೈ ಕಟ್ಟಿ ಹೊಡೆಯುತ್ತಿರುವ ದೃಶ್ಯದ ವಿಡಿಯೋ ಈಗ ವೈರಲ್ ಆಗಿದೆ.
ಕೆ.ಆರ್.ಪೇಟೆ ತಾಲೂಕಿನ ಕಾಳೇನಹಳ್ಳಿಯವನು ಎಂದು ಹೇಳಿಕೊಂಡಿರುವ ಯುವಕ, ಪದವಿ ವ್ಯಾಸಂಗ ಮಾಡುತ್ತಿದ್ದು ಖರ್ಚಿಗೆ ಹಣ ಇಲ್ಲದ ಕಾರಣ ಅನಿವಾರ್ಯವಾಗಿ ಕಳ್ಳತನಕ್ಕೆ ಇಳಿದುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಅನೇಕ ದಿನಗಳಿಂದ ಬಾಳೆಗೊನೆ ಕಳವು ಆಗುತ್ತಿತ್ತು. ಹೀಗಾಗಿ ಕಳ್ಳರನ್ನು ಹಿಡಿಯಬೇಕು ಎಂದು ಗ್ರಾಮಸ್ಥರು ಪಣತೊಟ್ಟಿದ್ದರು. ಕಳ್ಳನಿಗಾಗಿ ಹೊಂಚು ಹಾಕಿದ್ದ ಗ್ರಾಮಸ್ಥರ ಕೈಗೆ ಈ ಯುವಕ ಸಿಕ್ಕಿಬಿದ್ದಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ.