ನೋಟಿನಲ್ಲಿ ಮೂಡಿದ ವಿವಾಹ ಆಮಂತ್ರಣ

| ಸುದೀಶ್ ಸುವರ್ಣ

ಕಳಸ: ವಿವಾಹ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಆದರೆ ಬಹುತೇಕ ಮಂದಿ ಅಯ್ಯೋ ಮದುವೆಯಾದರೆ ಸಾಕು ಎಂಬ ಮನಸ್ಥಿತಿ ಹೊಂದಿರುತ್ತಾರೆ. ಇನ್ನೂ ಕೆಲವರು ಸಮಾರಂಭ ವಿಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಕಳಸ ಸಮೀಪದ ನೆಲ್ಲಿಬೀಡು ತೇಜಸ್ ಜೈನ್ ವಿಶೇಷವಾಗಿ ತಮ್ಮ ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸಿ, ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ತೇಜಸ್ ಜೈನ್ ಹಾಗೂ ಶ್ರುತಾ ಇವರ ವಿವಾಹ ಮಾ.31ರಂದು ಕಳಸದ ಮಹಾವೀರ ಭವನದಲ್ಲಿ ನಡೆಯಲಿದೆ. ಇವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ಎರಡು ಸಾವಿರ ರೂ. ಮುಖ ಬೆಲೆಯ ನೋಟಿನಂತೆ ಮುದ್ರಿಸಿದ್ದಾರೆ.

ಪತ್ರಿಕೆ ಕೊಡುವಾಗ ಯಾರಾದರೂ ಒಂದು ಬಾರಿ ಆಶ್ಚರ್ಯವಾಗುವುದು ಖಚಿತ. ಇದೇನಪ್ಪ ಮದುವೆ ಪತ್ರಿಕೆ ಕೊಡಲು ಬಂದವರು ಕೈಗೆ ನೋಟು ಕೊಡುತ್ತಿದ್ದರಲ್ಲಾ ಅಂದುಕೊಳ್ಳುತ್ತಾರೆ. ಅದನ್ನು ಸರಿಯಾಗಿ ಪರಿಶೀಲಿಸಿದಾಗಲೇ ಆಮಂತ್ರಣ ಪತ್ರಿಕೆ ಎಂಬುದು ಗೊತ್ತಾಗುತ್ತದೆ.

ತೇಜಸ್ ಏನಾದರೂ ಹೊಸದನ್ನು ಹುಡುಕುತ್ತ, ಹೊಸದನ್ನು ಮಾಡುವ ಕ್ರಿಯಾಶೀಲ ವ್ಯಕ್ತಿ. ಅದೇ ರೀತಿ ತನ್ನ ಮದುವೆಯಲ್ಲೂ ಕೂಡ ಹೊಸ ಪರಿಕಲ್ಪನೆ ಇಟ್ಟುಕೊಂಡು ಆಮಂತ್ರಣ ಪತ್ರಿಕೆ ಮುದ್ರಿಸಿದ್ದಾರೆ.

ಎರಡು ರೀತಿಯ ಪತ್ರಿಕೆ ಮುದ್ರಿಸಿದ್ದು, ತನ್ನ ಗೆಳೆಯರಿಗೆ ಕೊಡಲು ಎರಡು ಸಾವಿರ ರೂ. ನೋಟಿನ ಮಾದರಿಯಲ್ಲಿ ಮಾಡಿದರೆ,ನೆಂಟರಿಗೆ ಕೊಡಲೆಂದು ಮೊಬೈಲ್​ನಲ್ಲಿ ವಾಟ್ಸ್​ಆಪ್ ಮೆಸೇಜ್ ರೀತಿ ಮುದ್ರಣ ಮಾಡಿಸಿದ್ದಾರೆ. ಅದರಲ್ಲೂ ಮದುವೆ ಎಲ್ಲ ವಿವರ ಮುದ್ರಿಸಿದಲ್ಲದೆ, ಮದುವೆ ದಿನ ತಯಾರಿಸುವ ಉಪಾಹಾರ, ಊಟ, ತಿಂಡಿ, ಜ್ಯೂಸ್​ಗಳ ಪಟ್ಟಿಯನ್ನು ಬಾಳೆ ಎಲೆ ಆಕಾರದ ಚಿತ್ರದ ಮೇಲೆ ನಮೂದಾಗುವಂತೆ ಮಾಡಿಸಿದ್ದಾರೆ.

ಅಲ್ಲದೆ ಎರಡೂ ಪತ್ರಿಕೆಯಲ್ಲೂ ಬಾರ್ ಕೋಡ್ ಪ್ರಿಂಟರ್ ಆಗಿದೆ. ಇದನ್ನು ಸ್ಕ್ಯಾನ್ ಮಾಡಿದರೆ ವಧು-ವರನ ಹೆಸರು, ವಿವಾಹದ ಸ್ಥಳ, ದಿನಾಂಕ ಎಲ್ಲವೂ ಸಿಗುತ್ತದೆ. ನಮೂದಿಸಿದ ಊಟದ ಮೆನು ನೋಡಿದಾಗ ಬಾಯಲ್ಲಿ ನೀರೂರಿಸುವಂತೆ ಮಾಡಿದೆ.

ವೈದ್ಯರಿಂದ ಆರೋಗ್ಯ ತಪಾಸಣೆ: ಈ ವಿವಾಹದ ವಿಶೇಷತೆ ಆಮಂತ್ರಣ ಪತ್ರಿಕೆ, ಊಟಕ್ಕಷ್ಟೇ ಸೀಮಿತವಾಗಿಲ್ಲ. ಇಲ್ಲಿ ಇನ್ನೊಂದು ವಿಭಿನ್ನ ಕಾರ್ಯಕ್ರಮವಿದೆ. ಅಂದು ಸುಮಾರು 30 ವೈದ್ಯರು ಆಗಮಿಸಲಿದ್ದು, ಕಣ್ಣು, ಕಿವಿ, ಹೃದಯ, ಕೈಕಾಲು ನೋವು ಮತ್ತಿತರೆ ಕಾಯಿಲೆಗಳ ಉಚಿತ ತಪಾಸಣೆ ನಡೆಸುವರು. ಮದುವೆಗೆ ಬಂದ ಪ್ರತಿಯೊಬ್ಬರೂ ಭರ್ಜರಿ ಭೋಜನದ ಜತೆಗೆ ಆರೋಗ್ಯವನ್ನೂ ತಪಾಸಣೆ ಮಾಡಿಸಿಕೊಳ್ಳಬಹುದು. ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಕಾಲದಲ್ಲಿ ತನ್ನ ಮದುವೆಯಲ್ಲೂ ನಾಲ್ಕು ಜನರಿಗೆ ಉಪಯೋಗವಾಗಲಿ ಎಂಬ ಆಲೋಚನೆ ಇಟ್ಟುಕೊಂಡು ಈ ಶಿಬಿರ ಆಯೋಜಿಸಲಾಗಿದೆ.