ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಕೋಣೆಮನೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ತೀವ್ರವಾಗಿದೆ.

ಕೋಣೆಮನೆಯಲ್ಲಿ 11 ಕುಟುಂಬಗಳ 40ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಆದರೆ ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ಗ್ರಾಮದಲ್ಲಿ ಹಳೇ ಕಾಲದ ಒಂದು ಕುಡಿಯುವ ನೀರಿನ ಬಾವಿ ಇದೆ. ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ನೀರಿನ ಪ್ರಮಾಣ ಕಡಿಮೆಯಾಗಿದೆ.

ಗ್ರಾಮಕ್ಕೆ ಸರ್ಕಾರದಿಂದ ಕುಡಿಯುವ ನೀರಿಗಾಗಿ ಬೋರ್​ವೆಲ್ ಕೊರೆಸಿದ್ದರೂ ಈವರೆಗೆ ಸಂಪೂರ್ಣ ಪೈಪ್​ಲೈನ್ ಅಳವಡಿಸಿಲ್ಲ. ಇದರಿಂದ ಸ್ಥಳೀಯರು ಪ್ರತಿದಿನ ನೀರಿನ ಕೊಡವನ್ನು ಹೊತ್ತು ಸಾಗಬೇಕಿದೆ. ಅಪೂರ್ಣಗೊಂಡ ಪೈಪ್​ಲೈನ್​ನಲ್ಲಿ ಬರುವ ನೀರನ್ನು ಹಿಡಿಯಬೇಕಾದ ಸ್ಥಿತಿಯಿದೆ.

ಕೋಣೆಮನೆ ಗ್ರಾಮ ಮೇಲ್ಪಾಲ್-ಬಾಳೆಹೊನ್ನೂರು-ಕೊಪ್ಪ ರಸ್ತೆಯ ಪಕ್ಕದಲ್ಲೇ ಇದ್ದರೂ ಇಲ್ಲಿಗೆ ಸಂಪರ್ಕ ಕಲ್ಪಿಸಲು ರಸ್ತೆ ವ್ಯವಸ್ಥೆ ಇಲ್ಲ. ಕೇವಲ ಮಣ್ಣಿನ ಕಚ್ಚಾ ರಸ್ತೆಯಿದೆ. ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸಮಸ್ಯೆಗಳ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಗ್ರಾಮಸ್ಥರ ಸಮಸ್ಯೆ ಸ್ಪಂದಿಸಿಲ್ಲ. ಸಂಬಂಸಿದವರು ಕೂಡಲೇ ಗಮನಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.