ಮದ್ಯಪಾನ ಮುಕ್ತ ರಾಜ್ಯಮಾಡಲು ಬದ್ಧ

ತರೀಕೆರೆ: ಮದ್ಯಪಾನ ನಿಷೇಧಕ್ಕೆ ಒಕ್ಕೊರಲಿನ ನಿರ್ಧಾರ ತೆಗೆದುಕೊಂಡರೆ ರಾಜ್ಯವನ್ನು ಪಾನಮುಕ್ತಗೊಳಿಸಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

12 ವರ್ಷಗಳ ಹಿಂದೆ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಸಾರಾಯಿ ಮತ್ತು ಆನ್​ಲೈನ್ ಲಾಟರಿ ನಿಷೇಧಿಸಿದ್ದೇನೆ. ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರಿಗೆ ಇನ್ನೂ ಹತ್ತಿರವಾಗಲು ಯತ್ನಿಸಲಾಗುತ್ತಿದೆ. ಆದರೆ ಬಿಜೆಪಿ ಕುತಂತ್ರದಿಂದ ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದರು.

ದೇಶದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆ ಮಹತ್ವ ಪಡೆದಿದೆ. 2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಎಂದರು.

ಬಿಜೆಪಿ ಚುನಾವಣೆಯಲ್ಲಿ ಭಾರತೀಯ ಸೇನೆ ಮತ್ತು ಸರ್ಜಿಕಲ್​ಸ್ಟ್ರೈಕ್ ಅನ್ನು ಪ್ರಚಾರದ ಅಸ್ತ್ರವನ್ನಾಗಿಸಿಕೊಂಡಿದೆ. ದೇಶ ಸ್ವಾತಂತ್ರ್ಯದ ನಂತರ ಪ್ರಧಾನಿಯಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಆಡಳಿತದ ಜತೆಗೆ ದೇಶದ ರಕ್ಷಣೆ ಮಾಡಲಿಲ್ಲವೇ? ಎಂದು ಪ್ರಶ್ನಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ಚುನಾವಣೆಯಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ ಪ್ರಧಾನಿ ಮೋದಿ ಕೇವಲ ಇಬ್ಬರಿಗೂ ಉದ್ಯೋಗ ನೀಡಲಿಲ್ಲ. ಚುನಾವಣೆ ಹೊಸ್ತಿಲಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 6 ಸಾವಿರ ರೂ. ಕೊಡುವ ಉದ್ದೇಶ ಫಲಿಸಿಲ್ಲ. ಈವರೆಗೆ 17 ಫಲಾನುಭವಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದು, ಒಬ್ಬ ರೈತನ ಬ್ಯಾಂಕ್ ಖಾತೆಗೆ ಕೇವಲ 900 ರೂ. ಜಮಾ ಮಾಡಿದೆ ಎಂದು ಹೇಳಿದರು.

ವಿಜ್ಞಾನ್ ಇಂಡಸ್ಟ್ರೀಸ್ ಉಳಿವಿಗೆ ಮನವಿ: ಪಟ್ಟಣದ ವಿಜ್ಞಾನ್ ಇಂಡಸ್ಟ್ರೀಸ್ ಖಾಸಗೀಕರಣಗೊಳಿಸದಂತೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕಾರ್ಖಾನೆ ಮಜ್ದೂರ್ ಸಂಘದ ಪದಾಧಿಕಾರಿಗಳು ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಸಿಎಂ ಲೋಕಸಭೆ ಚುನಾವಣೆ ಬಳಿಕ ವಿಜ್ಞಾನ್ ಇಂಡಸ್ಟ್ರೀಸ್ ಖಾಸಗೀಕರಣಕ್ಕೆ ತಡೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸಿಎಂ ಏ.4 ರಂದು ವಿಜ್ಞಾನ್ ಇಂಡಸ್ಟ್ರೀಸ್ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಗಮನಸಿ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು.

ಶಾಸಕಿ ಶೋಭಾ ಕರಂದ್ಲಾಜೆ ಎಂದ ಸಚಿವೆ: ಸಿಎಂ ಆಗಮನಕ್ಕೂ ಮುಂಚೆ ವೇದಿಕೆಗೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯುವಾಗ ಸಂಸದೆ ಎನ್ನುವ ಬದಲು ಪದೇ ಪದೆ ಶಾಸಕಿ ಶೋಭಾ ಕರಂದ್ಲಾಜೆ ಎಂದು ಹೇಳಿ ಪ್ರಮುಖರು ಮತ್ತು ಕಾರ್ಯಕರ್ತರು ಮುಜುಗರ ಅನುಭವಿಸುವಂತೆ ಮಾಡಿದರು. ಕೆಲವು ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೆ ಪರದಾಡಿದರು. ಕಾರ್ಯಕರ್ತನೊಬ್ಬ ಜಯಮಾಲಾ ಕಿವಿಯಲ್ಲಿ ಶಾಸಕಿಯಲ್ಲ ಸಂಸದೆ ಹೇಳಿದ ಮೇಲೆ ಸಂಸದೆ ಎಂದು ಸಂಬೋಧಿಸಿದರು.