ಬಮೂಲ್​ನಲ್ಲಿ ದೋಸ್ತಿ ಕುಸ್ತಿ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಹೊರಗೆ ದೋಸ್ತಿ, ಒಳಗೆ ಕುಸ್ತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬುಧವಾರ ನಡೆಯಬೇಕಿದ್ದ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಪ್ರತಿಷ್ಠೆಗೆ ಬಲಿಯಾಗಿದೆ. ಕೋರಂ ಅಭಾವದ ನೆಪವೊಡ್ಡಿ ಚುನಾವಣೆಯನ್ನು ಮುಂದೂಡಲಾಗಿದೆ.

ರಾತ್ರಿ ಬೆಳಗಾಗುವುದರೊಳಗಾಗಿ ನಡೆದ ರಾಜಕೀಯ ಹೈಡ್ರಾಮದಲ್ಲಿ ಒಮ್ಮೆ ಜೆಡಿಎಸ್ ಕೈ ಮೇಲಾದರೆ, ಕೊನೆಯ ಹಂತದಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಚುನಾವಣೆ ನಡೆಸಬೇಕು ಎಂದು ಜೆಡಿಎಸ್ ಒತ್ತಾಸೆ. ಯಾವುದೇ ಕಾರಣಕ್ಕೂ ಚುನಾವಣೆ ನಡೆಸಬಾರದು ಎನ್ನುವುದು ಕಾಂಗ್ರೆಸ್ ನಿಲುವಾಗಿತ್ತು. ಕಾಂಗ್ರೆಸ್ ಜೊತೆಗೆ ಬಿಜೆಪಿ ಬೆಂಬಲಿತ ಮೂವರು ಸದಸ್ಯರ ಕೈಜೋಡಿಸಿದ್ದು ಅಚ್ಚರಿ. ಅಧ್ಯಕ್ಷ ಸ್ಥಾನಕ್ಕೆ ಕನಕಪುರ ಕ್ಷೇತ್ರದ ರಾಜಕುಮಾರ್ ಮತ್ತು ಮಾಗಡಿ ಕ್ಷೇತ್ರದ ನರಸಿಂಹಮೂರ್ತಿ ಉಮೇದುವಾರಿಕೆ ಸಲ್ಲಿಸಿದ್ದರು.

ಇದಕ್ಕೂ ಮುನ್ನ ಸಚಿವ ಕೃಷ್ಣಭೈರೇಗೌಡ ಮತ್ತು ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಿ ಮೊದಲ ಅವಧಿಗೆ ಮಾಗಡಿ ಕ್ಷೇತ್ರದಿಂದ ಆಯ್ಕೆಯಾಗಿರುವ ನರಸಿಂಹಮೂರ್ತಿ, ಎರಡನೇ ಅವಧಿಗೆ ಕನಕಪುರ ಕ್ಷೇತ್ರದ ರಾಜಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಎಂದು ತೀರ್ವನಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್​ನ ಶ್ರೀನಿವಾಸ್ ಹೆಸರನ್ನು ಸೂಚಿಸಿದ್ದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದರು.

ರೇವಣ್ಣ ರಂಗಪ್ರವೇಶ: ನರಸಿಂಹಮೂರ್ತಿ ಪರ ಮಾಜಿ ಶಾಸಕ ಬಾಲಕೃಷ್ಣ ನಿಂತಿದ್ದರೆ, ಕೃಷ್ಣಮೂರ್ತಿ ಪರವಾಗಿ ಹಾಲಿ ಶಾಸಕ ಮಾಗಡಿ ಮಂಜು ಪ್ರಚಾರ ನಡೆಸಿದ್ದರು. ಇದರ ಹಿಂದೆ ಸಚಿವ ರೇವಣ್ಣ ಅವರ ಕೈವಾಡವಿದೆ ಎನ್ನುವುದು ಕಾಂಗ್ರೆಸಿಗರ ಆರೋಪ.

ಮುಂದಿನ ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ಸಚಿವ ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದುಕೊಂಡಿದ್ದೇವೆಯೋ ಅವರನ್ನೇ ರಾತ್ರೋರಾತ್ರಿ ಅನರ್ಹ ಮಾಡಲಾಗಿದೆ. ಇದರಿಂದ ನಿರ್ದೇಶಕರು ಗೈರಾಗಿದ್ದಾರೆ ಎಂದು ಹಾಲಿ ಬಮೂಲ್ ಅಧ್ಯಕ್ಷ ಆಂಜನಪ್ಪ ಹೇಳಿದ್ದಾರೆ.

ಜಿದ್ದಿಗೆ ಬಿದ್ದ ಕಾಂಗ್ರೆಸ್ ನಾಯಕರು

ತನ್ನ ಬೆಂಬಲಿತ ಅಭ್ಯರ್ಥಿಯನ್ನಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದ ನರಸಿಂಹಮೂರ್ತಿ ಅವರನ್ನು ವಜಾ ಮಾಡಿಸಿರುವುದರ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಜೆಡಿಎಸ್ ಕೂಡ ಇರಿಸು ಮುರಿಸು ಅನುಭವಿಸುವಂತಾಯಿತು. ಕಾಂಗ್ರೆಸ್ ಕೂಡ ಜಿದ್ದಿಗೆ ಬಿದ್ದ ಹಿನ್ನೆಲೆಯಲ್ಲಿ ಚುನಾವಣೆ ಬಿಡಿಸಲಾರದ ಕಗ್ಗಂಟಾಯಿತು. ಅಂತಿಮವಾಗಿ ಈಗ ಗೊಂದಲದ ವಾತಾವರಣದಲ್ಲಿ ಚುನಾವಣೆ ನಡೆಸುವುದು ಬೇಡವೆಂದು ನಿರ್ದೇಶಕರು ಸಭೆಗೆ ಗೈರುಹಾಜರಾಗಿದ್ದರಿಂದ ಚುನಾವಣೆ ಮುಂದೂಡಲಾಯಿತು.

ನರಸಿಂಹಮೂರ್ತಿ ಸ್ಪರ್ಧೆ ತಡೆಯಲು ಯತ್ನ 

ಅಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಮತ್ತು ಅಧ್ಯಕ್ಷ ಹುದ್ದೆಯಿಂದ ನರಸಿಂಹಮೂರ್ತಿ ಬಮೂಲ್ ಅಧ್ಯಕ್ಷರಾಗುವುದನ್ನು ತಪ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ರಾತ್ರೋರಾತ್ರಿ ಅವರ ವಜಾ ಆದೇಶ ಹೊರಡಿಸಲಾಗಿತ್ತು. ಇದು ಚುನಾವಣಾ ಪ್ರಕ್ರಿಯೆ ನಡೆಯಲು ಅಡ್ಡಿಯಾಯಿತು.

Leave a Reply

Your email address will not be published. Required fields are marked *