ಈ ಯುವಕ ಬಿದಿರು ಇಂಜಿನಿಯರ್

ಬಿದಿರಿನಿಂದ ಮಾಡಿರುವ ಆಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಸುಲಭದಲ್ಲಿ ಸಿಗುತ್ತವೆ. ಆದರೆ ಇದೇ ಬಿದಿರಿನಲ್ಲಿಯೇ ಬಗೆಬಗೆಯ ಸಂಶೋಧನೆ ಕೈಗೊಂಡು ಹೊಸಹೊಸ ಪ್ರಯೋಗಕ್ಕೆ ತೊಡಗಿಸಿಕೊಂಡಿದ್ದಾರೆ ಕೊಪ್ಪಳದ ಪ್ರಕಾಶ.

| ವಿಠ್ಠಲ್ ಧುತ್ತರಗಿ

ಮನೆಯ ನೀಲ ನಕ್ಷೆ ಕೊಟ್ಟರೆ ತ್ರಿಡಿ ವಿನ್ಯಾಸಗೊಳಿಸಿ ಮನೆ ಹೇಗೆ ಕಾಣಿಸುತ್ತದೆ ಎಂದು ತೋರಿಸುವ ಇಂಜಿನಿಯರ್ಸ್ ಇದ್ದಾರೆ. ಆದರೆ ಈ ನಕ್ಷೆಯನ್ನು ನೋಡಿ ಕೇವಲ ಬಿದಿರಿನಲ್ಲಿಯೇ ಮನೆಯ ಮಾದರಿ ರೂಪಿಸಿತೋರಿಸುವವರನ್ನು ನೋಡಿದ್ದೀರಾ? ಇಂಥ ಒಬ್ಬ ಅಪರೂಪದ ಯುವ ಕಲಾವಿದ ಕೊಪ್ಪಳದ ಪ್ರಕಾಶ ಮ್ಯಾದರ್. ತಮ್ಮ ಕುಲ ಕಸುಬಾಗಿರುವ ಬಿದಿರಿನ ಮೇಲೆಯೇ ಬಗೆಬಗೆಯ ಸಂಶೋಧನೆ ನಡೆಸುತ್ತಿರುವ ಇವರು ಇದರಲ್ಲಿಯೇ ಮನೆಯ ಮಾದರಿಯನ್ನೂ ಮಾಡಿಕೊಡುತ್ತಾರೆ. ಕಡಿಮೆ ಬೆಲೆಯಲ್ಲಿ ಮನೆಯ ಮಾದರಿ ನೋಡುವ ಅವಕಾಶ ಮನೆ ಮಾಲೀಕರದ್ದಾಗುತ್ತದೆ. ಅಷ್ಟೇ ಅಲ್ಲದೇ, ಮನೆ ನಿರ್ವಣದ ನೀಲ ನಕ್ಷೆಯನ್ನು ನೋಡಿ, ಆ ಮನೆಯ ಯಾವ್ಯಾವ ಕೋಣೆಗೆ ಎಂಥೆಂಥ ಪರಿಕರಗಳು ಬೇಕು ಎಂದು ಅಂದಾಜು ಮಾಡಿಬಿಡುತ್ತಾರೆ. ಜತೆಗೆ, ಮಾಲೀಕರು ಬಯಸಿದರೆ ಅದಕ್ಕೆ ಬೇಕಾದ ಬಿದಿರಿನ ಪರಿಕರಗಳನ್ನು ತಯಾರಿಸಿಕೊಡುತ್ತಾರೆ. ಮನೆಯ ನಿರ್ವಣದ ಜತೆಗೆ, ಪರಿಕರಗಳೂ ಮನೆಯನ್ನು ಅಲಂಕರಿಸುತ್ತವೆ. ಒಂದು ರೀತಿಯಲ್ಲಿ ಇವರು ಬಿದರಿನ ಇಂಜಿನಿಯರ್ ಎನ್ನಬಹುದು!

ಬಡತನದ ಕಾರಣ 10ನೇ ತರಗತಿಗೆ ಓದು ನಿಲ್ಲಿಸಿದ ಪ್ರಕಾಶ, ಭವಿಷ್ಯದ ಚಿಂತೆ ಮಾಡುತ್ತಿದ್ದಾಗ, ಅವರ ಕೈಹಿಡಿದದ್ದು ಬಿದಿರಿನ ಕುಲಕಸುಬು. ಅವರ ಕೈಚಳಕದಲ್ಲಿ ಈಗಾಗಲೇ ನೂರಾರು ಬಗೆಯ ಆಲಂಕಾರಿಕ ವಸ್ತುಗಳು, ಗೃಹ ಬಳಕೆ ಪರಿಕರಗಳು ರೂಪುಗೊಂಡಿವೆ.

ತಮ್ಮ ಕುಲಕಸುಬಿಗೆ ಆಧುನಿಕ ಸ್ಪರ್ಶ ನೀಡಬೇಕು ಎನ್ನುವ ಉದ್ದೇಶದಿಂದ ಅವರು, ಬೆಂಗಳೂರು ಧಾರವಾಡದಲ್ಲಿ ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ ಪಡೆದಿದ್ದಾರೆ. ಬೆಂಗಳೂರಿನಲ್ಲೇ ಇದ್ದು, ಕುಸುರಿ ಕ್ಷೇತ್ರದ ಅನುಭವವನ್ನು ವಿಸ್ತರಿಸಿಕೊಂಡರು. ಅರಣ್ಯ ಇಲಾಖೆಯಿಂದ ಬಿದಿರು ಉತ್ಪನ್ನಗಳ ಮಾರಾಟಕ್ಕೆ ಮಾನ್ಯತೆ ಪಡೆದುಕೊಂಡು ಕೊಪ್ಪಳದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕವನ್ನು ಆರಂಭಿಸಿ ಕೆಲವರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ಇವರ ಕೈಯಲ್ಲಿ ಈಗಾಗಲೇ ಪ್ಯಾರಿಸ್​ನ ಐಫೆಲ್ ಟವರ್ ಕೂಡ ಅರಳಿದೆ. ಇದರೊಂದಿಗೆ ವಾಲ್ ಕೀ ಚೈನ್, ಲೆಟರ್ ಬಾಕ್ಸ್ , ಬೀಸಣಿಕೆ, ಪ್ಲವರ್ ಸೈಲ್, ಹಡಗುಗಳು, ಟಿಪಾಯ್, ಪೂಜಾ ಬುಟ್ಟಿ, ಪಾತ್ರೆಗಳಿಡುವ ಬುಟ್ಟಿ, ವಿಭೂತಿ ಬುಟ್ಟಿ, ರೊಟ್ಟಿ ಬುಟ್ಟಿ, ಬುತ್ತಿ ಬುಟ್ಟಿ, ತರಕಾರಿ ಬುಟ್ಟಿ, ಹಣ್ಣಿನ ಬುಟ್ಟಿ, ಮೊರ, ಕಸದ ಬುಟ್ಟಿಗಳು, ಲೈಟ್ ಲ್ಯಾಂಪ್, ಫೋಟೋ ಫ್ರೇಮ್ ಟೇಬಲ್, ಕುರ್ಚಿ, ಮೊಬೈಲ್ ಸ್ಟಾ್ಯಂಡ್, ಪಕ್ಷಿಗಳ ಗೂಡು ಸೇರಿದಂತೆ ಗ್ರಾಹಕರು ಏನು ಅಪೇಕ್ಷೆ ಪಡುತ್ತಾರೋ ಅವೆಲ್ಲವನ್ನೂ ಮಾಡಿಕೊಡುತ್ತಾರೆ.

ಟ್ರೆಂಡ್ ಬದಲಾದಂತೆ ಈಗಿನ ಮನೆಯ ಮಾಲೀಕರ ಅಭಿರುಚಿ ಕೂಡ ಬದಲಾಗುತ್ತಿದೆ. ಇಂಟರ್​ನೆಟ್​ನಲ್ಲಿ ನೋಡಿಕೊಂಡೋ, ಯಾವುದೋ ಫೋಟೋ ಅಥವಾ ಇನ್ನಾರದೋ ಮನೆಯಲ್ಲಿರುವ ವಸ್ತು ನೋಡಿಕೊಂಡು ತಮ್ಮ ಮನೆಗೂ ಅದೇ ರೀತಿಯ ಪರಿಕರ ಮಾಡಿಕೊಡುವಂತೆ ಹಲವರು ಹೇಳಿದರೆ, ಯಾರೂ ಮಾಡದ ಹೊಸ ವಿನ್ಯಾಸದ ಪರಿಕರಗಳನ್ನು ಮಾಡಿಕೊಡುವಂತೆ ಕೆಲವರು ದುಂಬಾಲು ಬೀಳುತ್ತಾರೆ. ತಮಗೆ ಇಂಥದ್ದೇ ಆಕಾರದ, ಇದೇ ಗಾತ್ರದ, ಇಂಥದ್ದೇ ಪರಿಕರ ಬೇಕು ಎಂದರೆ ಸಾಕು. ಅದನ್ನು ಯಥಾವತ್ತಾಗಿ ತಯಾರಿಸಿಕೊಡುವಲ್ಲಿ ಪ್ರಕಾಶ ಅವರದ್ದು ಎತ್ತಿದ ಕೈ. ಹೊಸ ಬಗೆಯ ವಿನ್ಯಾಸಗಳನ್ನು ಗ್ರಾಹಕರು ಬಯಸಿದರೆ, ಅವುಗಳನ್ನು ಇಂಟರ್​ನೆಟ್​ನಲ್ಲಿ ಹುಡುಕಿಕೊಂಡು ಅದಕ್ಕೆ ತಕ್ಕಂತೆ ವಿನ್ಯಾಸಗೊಳಿಸುವ ಕಲೆ ಇವರಿಗೆ ಕರಗತ.

ಪರಿಸರ ಜಾಗೃತಿ: ಪ್ಲಾಸ್ಟಿಕ್​ನಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಈ ಬಗ್ಗೆ ಕರಪತ್ರಗಳನ್ನು ಹಂಚುತ್ತಲೇ, ಬಿದಿರಿನ ವಸ್ತುಗಳ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನಾಡಿನ ಹಲವು ವಿಶ್ವವಿದ್ಯಾಲಯಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಕಾರ್ಯಕ್ರಮಕ್ಕೆ ಅಗತ್ಯವಿರುವ ಕಲಾಕೃತಿಗಳನ್ನು ಆರ್ಡರ್ ಕೊಟ್ಟು ಮಾಡಿಸಿಕೊಳ್ಳುತ್ತಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಕೆಲ ಇಲಾಖೆಗಳು ಅಥವಾ ಸಂಸ್ಥೆಗಳ ಆಹ್ವಾನದ ಮೇರೆಗೆ ಬಿದಿರು ಮೇಳಗಳಲ್ಲಿ ಭಾಗವಹಿಸುವ ಅವರು ಹೊಸ ಕಲಾವಿದರಿಗೆ, ಕರಕುಶಲ ಕಲೆಯ ತರಬೇತಿ ನೀಡುತ್ತಿದ್ದಾರೆ.

‘ಚೀನಾದಿಂದ ಆಮದಾಗುತ್ತಿರುವ ಮನೆ ಸಾಮಗ್ರಿ, ಮಕ್ಕಳ ಆಟಿಕೆ ಸಾಮಾನುಗಳ ಬಳಕೆ ಹೆಚ್ಚಳವಾಗಿ ಸ್ಥಳೀಯ ಕಲಾವಿದರಿಗೆ ಪೆಟ್ಟು ಬಿದ್ದಿವೆ. ಜನರು ವಿದೇಶಿ ವ್ಯಾಮೋಹ ತೋರದೆ ಸ್ಥಳೀಯವಾಗಿ ತಯಾರಾಗುವ ಪರಿಸರಸ್ನೇಹಿ ಪರಿಕರಗಳನ್ನು, ಆಟದ ಸಾಮಾನುಗಳನ್ನು ತೆಗೆದುಕೊಳ್ಳುವಂತಾಗಬೇಕು’ ಎನ್ನುವುದು ಅವರ ಮಾತು. ಸಂಪರ್ಕಕ್ಕೆ: 9980515559