ಅಕ್ರಮ ಗಣಿಗಾರಿಕೆ ತಡೆಗಟ್ಟಲು ಒತ್ತಾಯ

ವಿಜಯಪುರ: ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ನಗರದ ಗಣಿ ಹಾಗೂ ಭೂಗರ್ಭ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಬಸವರಾಜ ಹಳ್ಳೂರ ಮಾತನಾಡಿ, ಬಸವನ ಬಾಗೇವಾಡಿ ತಾಲೂಕಿನ ಹಣಮಾಪುರ, ಬಳೂತಿ, ಮಟ್ಟಿಹಾಳ ಗ್ರಾಮಗಳ ಜಮೀನುಗಳು ಒಂದಕ್ಕೊಂದು ಹೊಂದಿಕೊಂಡಿವೆ. ಬಳೂತಿ ಗ್ರಾಮದ ಸರಹದ್ದಿಯಲ್ಲಿ ಬರುವ ರಿ.ಸ.ನಂ.174 ಹಾಗೂ 175 ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿವೆ. 2014 ರಿಂದಲೂ ಈ ಗಣಿಗಾರಿಕೆ ನಡೆಯುತ್ತಲೇ ಇದೆ. ಈ ಗಣಿಗಾರಿಕೆಯ ಪರವಾನಗಿ ರದ್ದುಗೊಂಡಿದ್ದರೂ ಅಕ್ರಮವಾಗಿ ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದರು.
ಕಳೆದ ಜು.15 ರಂದು ಬಳೂತಿ, ಹಣಮಾಪುರ ಸೇರಿದಂತೆ ಹಲವಾರು ಗ್ರಾಮಸ್ಥರನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ವಾರ ಕಳೆದರೂ ಸಮಸ್ಯೆ ಬಗೆ ಹರಿದಿಲ್ಲ. ಅಕ್ರಮ ಗಣಿಗಾರಿಕೆಯಿಂದಾಗಿ ದಿನದಿಂದ ದಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅಕ್ರಮ ಗಣಿಗಾರಿಕೆ ಕಾರಣದಿಂದಾಗಿ ಹಣಮಾಪುರ, ಮಟ್ಟಿಹಾಳ, ಬಳೂತಿ ಗ್ರಾಮಗಳ 400-500 ಎಕರೆ ಜಮೀನು ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಮೊದಲೇ ಭೀಕರ ಬರಗಾಲ ರೈತರನ್ನು ಕಾಡುತ್ತಿದೆ. ಆದರೂ ರೈತರು ಕಷ್ಟಪಟ್ಟು ಬೆಳೆ ಬೆಳೆಯಬೇಕೆಂದರೆ ಅಕ್ರಮ ಗಣಿಗಾರಿಕೆಯ ಧೂಳಿನ ಪರಿಣಾಮವಾಗಿ ಬೆಳೆಗಳು ಬರುತ್ತಿಲ್ಲ, ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇನ್ನೊಂದೆಡೆ ನೀರಿನಲ್ಲಿಯೂ ಧೂಳು ಬಿದ್ದು ಕುಡಿಯಲು ಬಾರದಂತಾಗಿದೆ. ಅಲ್ಲದೆ ಸಮೀಪದಲ್ಲಿಯೇ ಆಶ್ರಯ ಯೋಜನೆಯ ಮನೆಗಳು ಇದ್ದು ಮನೆಗಳು ಬಿರಕು ಬಿಟ್ಟಿವೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗಣಿ-ಭೂಗರ್ಭ ಇಲಾಖೆಯ ಅಧಿಕಾರಿಗಳು, ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ವಾರದೊಳಗೆ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮಸ್ಥರಾದ ಬಿ.ಡಿ. ಹಳ್ಳೂರ, ಎನ್.ಡಿ. ಹಳ್ಳೂರ, ಇಸ್ಮಾಯಿಲ್ ಹೊನ್ಯಾಳ, ಎಸ್.ಡಿ. ಹಳ್ಳೂರ, ಎಸ್.ಎಸ್. ಹಳ್ಳೂರ, ನಿಂಗಪ್ಪ ಮಾದರ, ಎಸ್.ಆರ್. ಹಿರೇಮಠ, ಬಿ.ಡಿ. ನಾರಿಯರ್, ಶೇಖಪ್ಪ ಮಳೆಗಾಂವಿ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *