ಟ್ವಿಟರ್​ನಲ್ಲೂ ಪಾಕ್​ಗೆ ಭಾರಿ ಹಿನ್ನಡೆ: #BalochistanSolidarityDay ಮತ್ತು #14AugustBlackDay ಭಾರಿ ಟ್ರೆಂಡಿಂಗ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ಜಾಗತಿಕವಾಗಿ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಮುಖಭಂಗ ಅನುಭವಿಸುತ್ತಿದೆ. 2019ರ ಆ.14ರ ಸ್ವಾತಂತ್ರ್ಯೋತ್ಸವವನ್ನು ಕಾಶ್ಮೀರ ಏಕತಾ ದಿನವಾಗಿ ಆಚರಿಸುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ಬಿಡುಗಡೆ ಬೇಕು ಎಂದು ಹೇಳಿ ಬಲೂಚಿಸ್ತಾನ ಏಕತಾ ದಿನವಾಗಿ ಬಲೂಚಿಸ್ತಾನದ ಜನತೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆ.14ಅನ್ನು ಕರಾಳದಿನವನ್ನಾಗಿ ಆಚರಿಸುತ್ತಿದ್ದಾರೆ. ಬಲೂಚಿಸ್ತಾನದ ಜನತೆ ಈ ಕುರಿತು ಆರಂಭಿಸಿರುವ 2 ಹ್ಯಾಶ್​ಟ್ಯಾಗ್​ಗಳು ಭಾರಿ ಟ್ರೆಂಡಿಂಗ್​ ಪಡೆದುಕೊಂಡಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿಯನ್ನು ಇತ್ತೀಚೆಗೆ ರದ್ದುಪಡಿಸಿದ್ದಲ್ಲದೆ, ಈ ಪ್ರಸ್ತಾವನೆಗೆ ಲೋಕಸಭೆ ಮತ್ತು ರಾಜ್ಯಸಭೆಗಳ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತದ ಭಾಗದಲ್ಲಿರುವ ಕಾಶ್ಮೀರದಲ್ಲಿ ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿರುವ ಪಾಕಿಸ್ತಾನ ಈ ಬಾರಿಯ ತನ್ನ ಸ್ವಾತಂತ್ರ್ಯ ದಿನವನ್ನು ಕಾಶ್ಮೀರದ ಜನತೆಗೆ ಬೆಂಬಲ ಸೂಚಿಸುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಅದಕ್ಕಾಗಿ ಅದು ಈ ಬಾರಿಯ ಸ್ವಾತಂತ್ರ್ಯೋವಕ್ಕೆ ಕಾಶ್ಮೀರ ಏಕತಾ ದಿನ ಎಂಬ ಧ್ಯೇಯವಾಕ್ಯವನ್ನು ನೀಡಿತ್ತು.

ಆದರೆ ಪಾಕಿಸ್ತಾನದಿಂದ ಬಿಡುಗಡೆ ಬಯಸುತ್ತಿರುವ ಬಲೂಚಿಸ್ತಾನದ ಜನತೆಗೆ ಇದು ರುಚಿಸಿಲ್ಲ. ಹಾಗಾಗಿ ಅವರು ಬಲೂಚಿಸ್ತಾನ ಏಕತಾ ದಿನ ಹಾಗೂ 14 ಆಗಸ್ಟ್​ ಕರಾಳ ದಿನಾಚರಣೆ ಮಾಡಲು ನಿರ್ಧರಿಸಿದ್ದರು. ಅದರಂತೆ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ #BalochistanSolidarityDay ಮತ್ತು #14AugustBlackDay ಎಂಬ ಹ್ಯಾಶ್​ಟ್ಯಾಗ್​ಗಳನ್ನೂ ಆರಂಭಿಸಿದ್ದರು. ಈ ಹ್ಯಾಶ್​ಟ್ಯಾಗ್​ಗಳು ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಕ್ರಮವಾಗಿ 1 ಲಕ್ಷ ಮತ್ತು 54 ಸಾವಿರ ಟ್ವೀಟ್​ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಭಾರಿ ಟ್ರೆಂಡಿಂಗ್​ಗೆ ಬಂದಿವೆ.

ಆ.11ರಂದೇ ಬಲೂಚಿಸ್ತಾನ ಸ್ವಾತಂತ್ರ್ಯ ದಿನಾಚರಣೆ
ಪಾಕಿಸ್ತಾನ ನೈಋತ್ಯ ಭಾಗದಲ್ಲಿರುವ ಬಲೂಚಿಸ್ತಾನ ಅತ್ಯಂತ ಸೂಕ್ಷ್ಮ ಪ್ರದೇಶವೆನಿಸಿದೆ. ಈ ಪ್ರದೇಶದಲ್ಲಿ ಖನಿಜ ಸಂಪತ್ತು ಯಥೇಚ್ಚವಾಗಿದೆ. ಅದರಲ್ಲೂ ವಿಶೇಷವಾಗಿ ಅನಿಲ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಈ ಪ್ರದೇಶದ ನಿವಾಸಿಗಳ ಪ್ರಕಾರ 1947ರ ಆ.11ರಂದು ಬ್ರಿಟಿಷರು ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ. ಆದರೆ, ಪಾಕಿಸ್ತಾನ ಅಕ್ರಮವಾಗಿ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಲ್ಲಿನ ನಿವಾಸಿಗಳ ಹಕ್ಕುಗಳನ್ನು ದಮನ ಮಾಡುತ್ತಿದೆ. ಹಾಗಾಗಿ, ಪಾಕಿಸ್ತಾನದಿಂದ ಬಿಡುಗಡೆ ಬೇಕಾಗಿದೆ ಎಂದು ಹೇಳಿ ಬಲೂಚಿಸ್ತಾನ ನಿವಾಸಿಗಳು1948ರಿಂದ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದಾರೆ.

Leave a Reply

Your email address will not be published. Required fields are marked *