ಬಳ್ಳಾರಿಯ ಎಲ್ಲ ಶಾಸಕರಿಗೂ ಸಚಿವರಾಗುವ ಬಯಕೆ ಇದೆ: ಸಚಿವ ಜಮೀರ್​ ಅಹಮದ್​

ಹಾವೇರಿ: ಬಳ್ಳಾರಿಯ ಎಲ್ಲ ಶಾಸಕರೂ ಸಚಿವರಾಗಬೇಕು ಎನ್ನುತ್ತಾರೆ. ಆದರೆ, ಹೈಕಮಾಂಡ್​ ನಿರ್ಧಾರವೇ ಅಂತಿಮ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್​ ಅಹಮದ್​ ಹೇಳಿದರು.

ಮಾಧ್ಯಮದವರ ಜತೆ ಮಾತನಾಡಿದ ಹಾವೇರಿ ಉಸ್ತುವಾರಿ ಸಚಿವ ಜಮೀರ್​, ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ. ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ಜತೆ ಐವರು ಶಾಸಕರೂ ಇಲ್ಲ. ಕಾಂಗ್ರೆಸ್​-ಜೆಡಿಎಸ್​ ಒಟ್ಟಾಗಿದ್ದೇವೆ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಹೇಳಿದರು.

ಡಿಕೆಶಿಗೆ ಏನೂ ಆಗಿಲ್ಲ
ಸಚಿವ ಡಿಕೆಶಿಗೆ ಇ.ಡಿ.ಯ ಯಾವುದೇ ನೋಟಿಸ್​ ತಲುಪಿಲ್ಲ. ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕೆಶಿ ದೆಹಲಿಯಿಂದ ಬೆಂಗಳೂರಿಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳು ಇಲ್ಲ. ಡಿಕೆಶಿಗೆ ಕಾಂಗ್ರೆಸ್​ ಬೆಂಬಲ ನೀಡುತ್ತದೆ ಎಂದು ಹೇಳಿದರು.

ರಾಜಕಾರಣ ಶಿಫ್ಟ್​ ಆಗಿಲ್ಲ
ಬೆಳಗಾವಿಯಿಂದ ರಾಜಕಾರಣ ಬಳ್ಳಾರಿಗೆ ಶಿಫ್ಟ್​ ಆಗಿದೆ ಎಂಬುವುದು ಮಾಧ್ಯಮಗಳ ಊಹಾಪೋಹ. ಮಾಧ್ಯಮದವರು ಬೆಳಗಾವಿ ಮುಗಿಸಿ ಬಳ್ಳಾರಿಗೆ ಶಿಫ್ಟ್​ ಆಗಿದ್ದಾರೆ. ಎಲ್ಲೂ ಏನೂ ಅಸಮಾಧಾನ ಇಲ್ಲ ಎಂದರು.