ಭೂಮಿ ಮೇಲಿನ ನರಕ ವಿಮ್ಸ್ ಆಸ್ಪತ್ರೆ

<<ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅಸಮಾಧಾನ ವ್ಯಕ್ತ >>

ಬಳ್ಳಾರಿ: ಭೂಮಿಯ ಮೇಲಿನ ನರಕ ನೋಡಬೇಕೆಂದರೆ ವಿಮ್ಸ್‌ಗೆ ಒಮ್ಮೆ ಭೇಟಿ ನೀಡಿದರೆ ಸಾಕು. ಇಲ್ಲಿ ರೋಗಿಗಳಿಂದ ವೈದ್ಯರ ಹಣ ವಸೂಲಿ, ಕಿತ್ತೋಗಿರೋ ಬೆಡ್‌ನಲ್ಲಿ ಮಕ್ಕಳು, ಮಹಿಳೆಯರು. ಆಸ್ಪತ್ರೆಯಲ್ಲಿನ ದುರ್ವಾಸನೆ, ರೋಗಿಗಳಿಗೆ ಸೌಲಭ್ಯಗಳಿಲ್ಲದೆ ನರಳಾಟ, ಒಂದೆರಡು ಗಂಟೆ ಇದ್ದರೆ ನಾವು ಸಹ ರೋಗಿಗಳಾಗಿ ದಾಖಲಾಗುವ ಭಾವನೆ. ವಿಮ್ಸ್‌ನ್ನು ತೆರೆಯುವುದಕ್ಕಿಂತ ಮುಚ್ಚಿದರೆ ಉತ್ತಮ. ಇದಕ್ಕೆ ನಾನು ಸಹ ಶೀಫಾರಸ್ಸು ಮಾಡುವೆ…

ಇದು ನಗರದ ವಿಮ್ಸ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಕಂಡು ಬೇಸರದಿಂದ ನುಡಿದ ಮಾತುಗಳು. ಇದಕ್ಕೂ ಮುನ್ನ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಅಲ್ಲಿನ ಮೂಲ ಸೌಲಭ್ಯ, ರೋಗಿಗಳ ಆರೈಕೆ, ದಾಖಲೆಗಳ ನಿರ್ವಹಣೆ ಕಂಡು ಸಂತಸಗೊಂಡಿದ್ದರು. ಅದೇ ನಿರೀಕ್ಷೆಯಲ್ಲಿ ವಿಮ್ಸ್‌ಗೆ ಭೇಟಿ ನೀಡಿದ ವೇಳೆ ಎಲ್ಲ ತದ್ವಿರುದ್ಧವಾಗಿತ್ತು. ವಿಮ್ಸ್‌ನಲ್ಲಿನ ರೋಗಿಗಳ ಬೆಡ್, ಶೌಚಗೃಹ, ಸ್ವಚ್ಛತೆ, ವಾರ್ಡ್‌ಗಳ ನಿರ್ವಾಹಣೆ ಕಂಡು ನಿರ್ದೇಶಕರಿಗೆ, ವೈದ್ಯರಿಗೆ ಹಾಗೂ ನರ್ಸ್‌ಗಳಿಗೆ ತರಾಟೆ ತೆಗೆದುಕೊಂಡರು. ವಾರ್ಡ್‌ಗಳಲ್ಲಿ ಇರಿಸಿದ್ದ ತುಕ್ಕುಹಿಡಿದ ಟೇಬಲ್‌ಗಳನ್ನು ಖುದ್ದು ಬದಲಾಯಿಸಿದರು. ಆಸ್ಪತ್ರೆಯುದ್ಧಕ್ಕೂ ಮೂಗು ಮುಚ್ಚಿಕೊಂಡು ಪರಿಶೀಲನೆ ನಡೆಸಿದರು.

ಬಳಿಕ ಪ್ರತಿ ವಾರ್ಡ್‌ಗಳಿಗೆ ತೆರಳಿ ವೈದ್ಯರ, ನರ್ಸ್‌ಗಳ, ಚಿಕಿತ್ಸೆ ನೀಡುವ ಬಗ್ಗೆ, ಸೌಲಭ್ಯ ಕುರಿತು ರೋಗಿಗಳೊಂದಿಗೆ ಮಾಹಿತಿ ಪಡೆದರು. ಈ ವೇಳೆ ರೋಗಿಗಳು ವಿಮ್ಸ್‌ನಲ್ಲಿ ವೈದ್ಯರು, ನರ್ಸ್, ಆಯಾಗಳು ಆಸ್ಪತ್ರೆಯಲ್ಲಿ ಒಳಗಡೆ ಬಿಡಲು ಹಣ ವಸೂಲಿ ಮಾಡುತ್ತಿದ್ದಾರೆ. ಇದು ಕೇವಲ ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಯಾಗಿದ್ದು, ಇಲ್ಲಿ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಸ್ಪಂದಿಸುತ್ತಾರೆ. ಸರಿಯಾದ ಸೌಲಭ್ಯಗಳೂ ನೀಡುತ್ತಿಲ್ಲ. ರೋಗಿಗಳ ಹಿಂದೆ ಬಂದವರು ನೆಲದ ಮೇಲೆ ಮಲಗಿಕೊಳ್ಳಬೇಕಿದೆ. ಬೆಡ್ ನೀಡಲು ಸಹ ಹಣ ವಸೂಲಿ ಮಾಡುತ್ತಿದ್ದು, ಬಡ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಯೋಗದ ಅಧ್ಯಕ್ಷೆ ಎದುರು ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡರು.

ಬಳಿಕ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವರ್ಗ, ನರಕ ಎನ್ನುವುದು ಎಲ್ಲಿಯೂ ಇಲ್ಲ. ಆದರೆ, ಮನುಷ್ಯ ಬದುಕಿದ್ದಾಗ ನರಕ ದರ್ಶನ ಪಡೆಯಲು ವಿಮ್ಸ್‌ಗೆ ಭೇಟಿ ಕೊಟ್ಟರೆ ಸಾಕು. 1700 ಬೆಡ್‌ಗಳಿರುವ ಈ ಆಸ್ಪತ್ರೆ 1947ಪೂರ್ವದಲ್ಲಿ ಇದ್ದ ಆಸ್ಪತ್ರೆ ಎಂಬಂತೆ ಭಾಸವಾಗುತ್ತಿದೆ. ಇಲ್ಲಿನ ನಿರ್ದೇಶಕರ, ವೈದ್ಯರ ನಿರ್ಲಕ್ಷೃದಿಂದ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಾಡುತ್ತಿದೆ. ಸ್ವಚ್ಛತೆಯಿಲ್ಲ. ರೋಗಿಗಳೊಂದಿಗೆ ನರ್ಸ್, ಡಿ ಗ್ರೂಪ್ ನೌಕರರ ವರ್ತನೆ ಸರಿಯಿಲ್ಲ. ವಿಮ್ಸ್‌ನಲ್ಲಿ ಚಿಕಿತ್ಸೆ ನಂಬಿಕೊಂಡು ಬಂದ ರೋಗಿಗಳ ಸ್ಥಿತಿ ಹೇಳತೀರದು. ಇಲ್ಲಿನ ವೈದ್ಯರು, ಸಿಬ್ಬಂದಿ ನೀಚತನಕ್ಕೆ ಇಳಿದ್ದಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಎಂದು ದೊಡ್ಡದಾಗಿ ಬೋರ್ಡ್ ಹಾಕಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. 500, 200ರೂ. ಕೊಟ್ಟರೆ ಮಾತ್ರ ಇಲ್ಲಿ ಚಿಕಿತ್ಸೆ ನೀಡುವುದು ವಿಪರ್ಯಾಸ. ಈ ಆಸ್ಪತ್ರೆ ವೈದ್ಯಲೋಕಕ್ಕೆ ಕಳಂಕವಾಗಿದೆ. ಅಲ್ಲದೇ, ತರಕಾರಿ, ಫಿಶ್ ಮಾರ್ಕೆಟ್ ಎಂಬಂತಿದೆ. ಇದರಿಂದ ಇಲ್ಲಿನ ರೋಗಿಗಳು ಗುಣಮುಖರಾಗುವ ಬದಲು ಪುನಃ ಇಲ್ಲಿಯೇ ದಾಖಲಾಗುವುದು ನಿಶ್ಚಿತ. ಈ ಬಗ್ಗೆ ಪರಿಶೀಲಿಸಲು ವೈದ್ಯಕೀಯ ಇಲಾಖೆಗೆ ಕಣ್ಣು, ಕಿವಿ, ಮೂಗು ಇಲ್ಲದಂತಾಗಿದ್ದು, ಅಧಿಕಾರಿಗಳ ನಡೆ ಅನುಮಾನ ಮೂಡಿಸಿದೆ. ಈ ಆಸ್ಪತ್ರೆ ತೆರೆಯುವುದಕ್ಕಿಂತ ಮುಚ್ಚುವುದೇ ಉತ್ತಮ. ಇದಕ್ಕೆ ನಾನು ಬೇಕಾದರೆ ಶಿಫಾರಸ್ಸು ಮಾಡುವೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ವೈದ್ಯಕೀಯ, ಆರೋಗ್ಯ ಸಚಿವರ ಬಳಿ ಚರ್ಚಿಸಲಾಗುವುದು. ಆಸ್ಪತ್ರೆಯ ನಿರ್ವಹಣೆ ಬಗ್ಗೆ ನಿರ್ಲಕ್ಷವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ವಿಮ್ಸ್ ಅಧೀಕ್ಷಕ ಡಾ.ಮರಿರಾಜ್ ಮಾತನಾಡಿ, ವೈದ್ಯರು ಹಣ ವಸೂಲಿ ಮಾಡುವ ಬಗ್ಗೆ ಗಮನಕ್ಕೆ ಬಂದಿಲ್ಲ. ಬೆಡ್‌ಗಳು ಸರಿಯಿಲ್ಲದಿರುವ ಬಗ್ಗೆ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಇನ್ನು ಮುಂದೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು, ಹಣವಸೂಲಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *