ಜನೇವರಿಯಲ್ಲಿ ಹೂಳು ತೆರವು – ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾಹಿತಿ

ಬಳ್ಳಾರಿ: ಸರ್ಕಾರ ಹೂಳು ಎತ್ತುವುದು ಅಸಾಧ್ಯ ಎಂದು ಕೈ ಚೆಲ್ಲಿರುವುದರಿಂದ ಕಳೆದ 3 ವರ್ಷದಿಂದ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯುವ ಕೆಲಸವನ್ನು ರೈತರ ಜತೆಗೂಡಿ ಮಾಡಲಾಗಿದೆ. 2020ರಲ್ಲಿ ಜನೇವರಿಯಿಂದಲೇ ಪ್ರಾರಂಭಿಸಲಾಗುವುದು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಹೇಳಿದರು.

ಡ್ಯಾಂನಲ್ಲಿ ತುಂಬಿದ ಹೂಳು ತೆರವು ಮಾಡುವ ಬಗ್ಗೆ ಇಂಜಿನಿಯರ್‌ಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಅಧಿಕಾರಿಗಳು, ನಿವೃತ್ತ ಇಂಜಿನಿಯರ್, ರೈತರ ಸಲಹೆ ಪಡೆದು ಹೂಳು ತೆರವಿನ ಬಗ್ಗೆ ಗಂಭೀರವಾಗಿ ಚರ್ಚಿಸಬೇಕು. ಅದನ್ನು ಬಿಟ್ಟು, ಯಾವುದೇ ಮಹಿತಿ ಪಡೆಯದೇ ಹೂಳೆತ್ತುವುದು ಅಸಾಧ್ಯ ಎನ್ನುವುದು ಯಾವ ನ್ಯಾಯ? ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಹಾಗೂ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ನೀರಾವರಿ ಸಚಿವರನ್ನು ರೈತರ ನಿಯೋಗದೊಂದಿಗೆ ಭೇಟಿ ಮಾಡಿ ಹೂಳು ತೆರವಿಗೆ ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದರು.

ಸದ್ಯ ಎಲ್‌ಎಲ್‌ಸಿ ಕಾಮಗಾರಿ ನಡೆಯುತ್ತಿದ್ದು, ಕಾಲುವೆ ನಿರ್ಮಾಣ ಕಾಮಗಾರಿ ಈ ಹಿಂದಿನ ಆಕಾರದಂತೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ರೈತರಿಗೆ ಯಾವುದೇ ಗೊಂದಲ ಬೇಡ. ಅಲ್ಲದೇ ಸಮ್ಮಿಶ್ರ ಸರ್ಕಾರ ಜಿಂದಾಲ್ಗೆ ಈ ಹಿಂದೆ ಜಮೀನು ನೀಡಿದ್ದು, ಅದು ಯಾವ ಬೆಲೆಗೆ ಮಾರಾಟವಾದರೂ ಅದರಿಂದ ರೈತರಿಗೆ ಲಾಭವಿಲ್ಲ. ಆದರೆ ಈ ಕುರಿತು ಕೆಲ ರೈತ ಸಂಘಟನೆಗಳಲ್ಲಿ ಗೊಂದಲಗಳಿದ್ದು, ಕೆಲ ಪಕ್ಷಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ರೈತರನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಗಳು ಜಿಂದಾಲ್‌ನಿಂದ ಹಣ ದೋಚುವ ಉದ್ದೇಶದಿಂದ ರೈತರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿವೆ ಎಂದು ಆರೋಪಿಸಿದರು.

ಮುಖಂಡರಾದ ಸಂಘದ ವೀರನಗೌಡ, ಕುರುಬರ ಮೂರ್ತಿ, ಜಾಲಿಹಾಳ ಚಂದ್ರಗೌಡ, ಗಂಗಾವತಿ ವೀರೇಶ, ದರೂರು ರಾಮ್ಜಾನ್ ಸಾಬ್ ಇದ್ದರು.

2017ರಲ್ಲಿ 30ಲಕ್ಷ ರೂ. ವೆಚ್ಚದಲ್ಲಿ 30ದಿನಗಳ ಕಾಲ ನಿತ್ಯ 80ಟ್ರ್ಯಾಕ್ಟರ್, 20 ಲಾರಿ, 6 ಜೆಸಿಬಿಗಳಿಂದ, 2018ರಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ಕೇವಲ ಒಂದು ದಿನ 75 ಟ್ರ್ಯಾಕ್ಟರ್, 5ಜೆಸಿಬಿಗಳಿಂದ ಹೂಳು ತೆರವು ಮಾಡಲಾಗಿದೆ. 2019ರಲ್ಲಿ 5.47ಲಕ್ಷ ರೂ. ವೆಚ್ಚದಲ್ಲಿ 5ದಿನಗಳ ಕಾಲ 4 ಜೆಸಿಬಿ, 25 ಟ್ರ್ಯಾಕ್ಟರ್‌ಗಳಿಂದ ಹೂಳು ತೆರವು ಮಾಡಲಾಗಿದೆ. 2020ರಲ್ಲಿ ಜನವರಿಯಿಂದಲೇ ಹೂಳಿನ ಜಾತ್ರೆ ನಡೆಸಲಾಗುವುದು.
| ಜಿ.ಪುರುಷೋತ್ತಮಗೌಡ ತುಂಗಭದ್ರಾ ರೈತ ಸಂಘದ ಅಧ್ಯಕ್ಷ