ಸುಕೋ ಬ್ಯಾಂಕ್‌ಗೆ ಬೆಳ್ಳಿ ಹಬ್ಬದ ಸಂಭ್ರಮ

<ಜ.1ರಿಂದ ಎಲ್ಲ ಶಾಖೆಗಳಲ್ಲಿ ರಜತ ಸಂಭ್ರಮ> ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿಕೆ>

ಬಳ್ಳಾರಿ: ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುಕೋ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಹಿನ್ನೆಲೆಯಲ್ಲಿ 2019ರ ಜ.1ರಿಂದ ವರ್ಷಪೂರ್ತಿ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ರಜತ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.


ಬೆಳ್ಳಿಹಬ್ಬ ಸಂಭ್ರಮದ ಕುರಿತಾಗಿ ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜ.5ರ ಬೆಳಗ್ಗೆ 6ಕ್ಕೆ ನಗರದಲ್ಲಿ ‘ಸುಸ್ಥಿರ ಕೃಷಿಗಾಗಿ’ ಧ್ಯೇಯವಾಕ್ಯದಡಿ ಮ್ಯಾರಥಾನ್ ಆಯೋಜಿಸಲಾಗಿದೆ. ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗುವ ಮ್ಯಾರಥಾನ್, ಗಡಿಗಿ ಚನ್ನಪ್ಪ ವೃತ್ತ, ರೈಲ್ವೆ ನಿಲ್ದಾಣ, ಎಚ್.ಆರ್.ಗವಿಯಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಕನಕ ದುರ್ಗಮ್ಮ ದೇವಸ್ಥಾನ ತಲುಪಲಿದೆ.

ಮ್ಯಾರಾಥಾನ್, ಬಹುಮಾನ ವಿತರಣೆ

ರಾಜ್ಯದ ಕೃಷಿ ಸಾಧಕರು, ರೈತರು, ಸುಕೃತ ಕೃಷಿ ಪುರಸ್ಕೃತರು, ಪ್ರಗತಿಪರರು, ಕೃಷಿ ತಜ್ಞರು, ವಿದ್ಯಾರ್ಥಿಗಳು ಸೇರಿ ಒಂದು ಸಾವಿರಕ್ಕಿಂತ ಹೆಚ್ಚು ಜನ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. 14 ವರ್ಷ ಮೇಲ್ಪಟ್ಟವರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ.ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ನೀಡಲಾಗುವುದು ಎಂದರು.

ಕೃಷಿಕರೊಂದಿಗೆ ಸಂವಾದ

ಜ.5ರ ಮಧ್ಯಾಹ್ನ 12ಕ್ಕೆ ಜಿಪಂ ಸಭಾಂಗಣದಲ್ಲಿ ಬರ ಗೆದ್ದ ಕೃಷಿಕರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸುಕೋ ಬ್ಯಾಂಕ್ ಪ್ರಾಯೋಜಿತ ‘ಸುಕೃತ ಕೃಷಿ’ ಪ್ರಶಸ್ತಿ ಸಂಚಾಲನ ಸ್ವತಂತ್ರ ಸಮಿತಿಯಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯದೇ, ಸ್ವಂತ ಪರಿಶ್ರಮದಿಂದ ಕೃಷಿಯಲ್ಲಿ ಯಶಸ್ಸು ಸಾಧಿಸಿರುವ 45 ಸಾಧಕರನ್ನು ಗುರುತಿಸಿ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ. ಕೃಷಿ ಸಚಿವ ಶಿವಶಂಕರರೆಡ್ಡಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಖಾದ್ಯಗಳ ಸ್ಪರ್ಧೆ, ಪ್ರದರ್ಶನ, ಮಾರಾಟ ಮೇಳ

ಜ.5ರ ಸಂಜೆ 6ಕ್ಕೆ ನಗರದ ಬಸವ ಭವನದಲ್ಲಿ ‘ಆಹಾರ ಪ್ರತಿಭಾನ್ವೇಷಣೆಯಿಂದ ಉದ್ದಿಮೆಯತ್ತ’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಡುಗೆ ಮನೆಗೆ ಸೀಮಿತವಾಗಿರುವ ಆಹಾರ ತಯಾರಿಕಾ ಪ್ರತಿಭೆಗಳನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವುದು ಕಾರ್ಯಕ್ರಮದ ಉದ್ದೇಶ. ಉತ್ತರ ಕರ್ನಾಟಕದಲ್ಲಿ ಮರೆಯಾದ ತಿಂಡಿಗಳು, ಸಿರಿಧಾನ್ಯ ಖಾದ್ಯಗಳ ತಯಾರಿಕಾ ಸ್ಪರ್ಧೆ, ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ ಎಂದು ಹೇಳಿದರು.

ತೀರ್ಪುಗಾರರಾಗಿ ಸಿಹಿಕಹಿ ಚಂದ್ರು

ಸ್ಪರ್ಧಿಗಳು ಎರಡೂ ವಿಭಾಗಗಳಲ್ಲಿ ಪಾಲ್ಗೊಳ್ಳಬಹುದು. ಜಿಲ್ಲಾ ಮಟ್ಟದಿಂದ ಆರಂಭವಾಗುವ ಸ್ಪರ್ಧೆಯ ಮೆಗಾ ಫೈನಲ್ 2019ರ ಡಿಸೆಂಬರ್‌ನಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರನ್ನು ಮೆಗಾ ಫೈನಲ್‌ಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಮೊದಲ ಬಹುಮಾನ 10 ಸಾವಿರ ರೂ. ಎರಡನೇ ಬಹುಮಾನ 7,500 ರೂ. ಮತ್ತು ತೃತೀಯ ಬಹುಮಾನ ಐದು ಸಾವಿರ ರೂ. ಇದೆ. ಮೆಗಾ ಫೈನಲ್‌ನಲ್ಲಿ ಮೊದಲ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಮತ್ತು ತೃತೀಯ ಬಹುಮಾನ 10 ಸಾವಿರ ರೂ. ಇದೆ. ನಟ ಸಿಹಿಕಹಿ ಚಂದ್ರು ತೀರ್ಪುಗಾರರಾಗಿದ್ದಾರೆ ಎಂದರು.

ಬ್ಯಾಂಕ್ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ವರರಾವ್, ಸಿಇಒ ಪರಿಮಳಾಚಾರ್ಯ ಅಗ್ನಿಹೋತ್ರಿ ಇದ್ದರು.

ಅಡುಗೆ ತಯಾರಕರಿಗೆ ಪ್ರೋತ್ಸಾಹ

ಪ್ರತಿಭಾನ್ವಿತ ಅಡುಗೆ ತಯಾರಕರನ್ನು ಪ್ರೋತ್ಸಾಹಿಸಿ ಉದ್ಯಮ ಕ್ಷೇತ್ರಕ್ಕೆ ಪರಿಚಯಿಸುವ ಜತೆಗೆ ಈ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಲು ಅಗತ್ಯ ತಾಂತ್ರಿಕ ಹಾಗೂ ಆಡಳಿತಾತ್ಮಕ ನೆರವನ್ನು ಸುಕೋ ಬ್ಯಾಂಕ್ ನೀಡಲಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತರು ಸುಕೋ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಬಸವ ಭವನದಲ್ಲಿ ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಆಯ್ಕೆ ಮಾಡಿರುವ ತಲಾ ಒಬ್ಬ ಕೃಷಿಕ ಹಾಗೂ ಕೃಷಿ ತಂತ್ರಜ್ಞಾನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಒಂದು ಲಕ್ಷ ರೂ., ಪಾರಿತೋಷಕ ಮತ್ತು ಪ್ರಶಂಸಾ ಪತ್ರ ಒಳಗೊಂಡಿರುತ್ತದೆ. ಕೃಷಿ ಸಾಧಕರ ಕುರಿತು ಸಾಕ್ಷಾೃಚಿತ್ರ ಹಾಗೂ ಪುಸ್ತಕ ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಬಾಲ ಕಲಾವಿದರಾದ ಜ್ಞಾನೇಶ್, ಪ್ರಕೃತಿ ರೆಡ್ಡಿ ಹಾಗೂ ವಿಶ್ವಪ್ರಸಾದ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.