ಗಣಿಬಾಧಿತರ ಅಭಿವೃದ್ಧಿಗೆ ನಿಧಿ ವಿನಿಯೋಗಿಸಿ

 ಸಂಡೂರಲ್ಲಿ ಕಾರ್ಯಾಗಾರಕ್ಕೆ ಚಾಲನೆ >>

ಸಂಡೂರು: ಗಣಿಬಾಧಿತ ಪ್ರದೇಶದ ಅಭಿವೃದ್ಧಿಗಾಗಿ ಸಂಗ್ರಹವಾದ 13 ಸಾವಿರ ಕೋಟಿ ರೂ. ಬಾಧಿತ ಜನರ ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಅಗತ್ಯ ಸೌಲಭ್ಯಗಳಿಗೆ ವಿನಿಯೋಗಿಸಬೇಕು ಎಂದು ಸಮಾಜ ಪರಿವರ್ತನೆ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗಣಿಬಾಧಿತ ತಾಲೂಕುಗಳ ಸುಸ್ಥಿರ ಅಭಿವೃದ್ಧಿ ಕುರಿತು ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಗುರುವಾರ ಮಾತನಾಡಿದರು. ಅಕ್ರಮ ಮತ್ತು ಸಕ್ರಮ ಗಣಿಗಾರಿಕೆಯಿಂದ ವಸೂಲಾದ ಮತ್ತು ಸಂಗ್ರಹವಾಗುವವ ಹಣ ಗಣಿಬಾಧಿತ ಪ್ರದೇಶಕ್ಕೆ ಬಳಸುವಂತೆ ಸುಪ್ರೀಂಕೋಟ್ ನಿರ್ದೇಶಿಸಿತ್ತು. ಅದರಂತೆ ರಾಜ್ಯ ಸರ್ಕಾರ 2013ರಲ್ಲಿ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಗಮ(ಕೆಎಂಆರ್‌ಸಿಇಎಲ್) ಸ್ಥಾಪಿಸಿತು. ಈ ನಡುವೆ ಕೇಂದ್ರ ಸರ್ಕಾರ ಡಿಎಂಎಫ್(ಜಿಲ್ಲಾ ಖನಿಜ ನಿಧಿ) ಆರಂಭಿಸಿತು. ಆದರೆ, ಕೆಲ ಗಣಿಗುತ್ತಿಗೆದಾರರು ಎರಡಕ್ಕೂ ನಿಧಿ ಕೊಡಲು ನಿರಾಕರಿಸಿ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಎರಡಕ್ಕೂ ನಿಗದಿತ ನಿಧಿ ನೀಡುವಂತೆ ಸೂಚಿಸಿತು. ಆದರೆ, ಹಣ ಬಳಕೆ ಆಗುತ್ತಿಲ್ಲ. ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿ ರಚಿಸಿದ್ದು, ಯುವಕ, ಯುವತಿಯರು ಪ್ರತಿ ಹಳ್ಳಿಗೆ ಹೋಗಿ ಅಲ್ಲಿನ ಜನರ ಮೂಲ ಸಮಸ್ಯೆಗಳ ಪಟ್ಟಿ ಮಾಡಿ ಕ್ರಿಯಾ ಯೋಜನೆ ಸಲ್ಲಿಸಬೇಕಿದೆ. ಅದಕ್ಕಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಎಸ್‌ಯುಸಿಐ ಮುಖಂಡ ಎ.ರಾಮಾಂಜಿನಪ್ಪ, ಕನ್ನಡ ವಿವಿಯ ಚಂದ್ರ ಪೂಜಾರಿ ಮಾತನಾಡಿದರು. ಪುಣೆಯ ಗೋಖಲೆ ಇನ್ಸ್‌ಟಿಟ್ಯೂಟ್‌ನ ಪ್ರೊ.ಕೈಲಾಸ್ ಸಿ.ತಾವರೆ, ಪರಿಸರವಾದಿ ಸಂತೋಷ್ ಮಾರ್ಟಿನ್, ಜಸಂಪ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲದಹಳ್ಳಿ, ಜನಾಂದೋಲನ ಮಹಾಮೈತ್ರಿಯ ಚಂದ್ರಶೇಖರ್ ಮೇಟಿ, ಆರ್.ಸೋಮಶೇಖರಗೌಡ, ನಾಗಲಕ್ಷ್ಮಿ, ಕೆ.ಈರಮ್ಮ ಇತರರಿದ್ದರು.