ಭಯದ ನೆರಳಲ್ಲಿ ಅಕ್ಷರಾಭ್ಯಾಸ

<<ಗಡಿಗ್ರಾಮ ರಾಯಪುರ ಸರ್ಕಾರಿ ಶಾಲೆ ಕಟ್ಟಡ ಶಿಥಿಲ  > ಮೂರೇ ಕೊಠಡಿಗಳಲ್ಲಿ 1-8ನೇ ತರಗತಿ >>

ಮಾರುತಿ ಸುಣಗಾರ

ಬಳ್ಳಾರಿ: ಇಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ನಿತ್ಯ ಭಯದ ವಾತಾವರಣದಲ್ಲಿ ಪಾಠ ಕೇಳಬೇಕು. ಶಿಕ್ಷಕರು ಬೋರ್ಡ್ ಬದಲಿಗೆ ಛಾವಣಿ ಸಿಮೆಂಟ್ ಪದರು ಉದರುತ್ತದೆಯೋ ಎಂಬ ಭೀತಿ ನಡುವೆ ಪಾಠ ಹೇಳಬೇಕು…

ಹೌದು, ಇದು ಜಿಲ್ಲೆಯ ಗಡಿ ಗ್ರಾಮವಾದ ರೂಪನಗುಡಿ ಹೋಬಳಿಯ ರಾಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ. ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 150 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕ ಸೇರಿ ಐವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಎಂಟು ಕೊಠಡಿಗಳಿದ್ದು ಐದು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಬೀಗ ಜಡಿಯಲಾಗಿದೆ. ಇನ್ನುಳಿದ ಮೂರು ಕೊಠಡಿಗಳಲ್ಲಿ 1 ರಿಂದ 8 ತರಗತಿ ಮಕ್ಕಳಿಗೆ ಪಾಠ ಜತೆಗೆ ಅದರಲ್ಲಿಯೇ ಕಚೇರಿ ರೂಂ, ಶಾಲೆಗೆ ಸಂಬಂಧಿಸಿದ ದಾಖಲೆಗಳು, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಸಂಗ್ರಹಿಸಿ ಇರಿಸಲಾಗಿದೆ.

ಸದ್ಯ ಇರುವ ಮೂರು ಕೊಠಡಿಗಳೂ ದುರಸ್ತಿಯಲ್ಲಿದ್ದು, ಆಗಾಗ ಛಾವಣಿ ಪದರು ಕುಸಿದು ಬಿಳುವುದು ಸಾಮಾನ್ಯವಾಗಿದೆ. ಇನ್ನು ಮಳೆ ಬಂದರೆ ಕೊಠಡಿಗಳು ಸೋರುತ್ತವೆ. ಮುಖ್ಯ ಶಿಕ್ಷಕರ ಒಂದು ಕೊಠಡಿಯಲ್ಲಿ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರೆ ಇನ್ನೊಂದು ಕೊಠಡಿಯಲ್ಲಿ 5 ಮತ್ತು 6ನೇ ತರಗತಿ ಹಾಗೂ ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ಕೊಠಡಿಯಲ್ಲಿ ನಲಿಕಲಿ ಹೇಳಿಕೊಡಲಾಗುತ್ತಿದೆ. ಇದರಿಂದ ಯಾವ ತರಗತಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವಿದ್ದರೂ ಕೊಠಡಿ ಸಮಸ್ಯೆಯಿಂದ ಶಿಕ್ಷಕರು ಅನಿವಾರ್ಯವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಕಳೆದ 2006-07ನೇ ಸಾಲಿನಲ್ಲಿ 9ಲಕ್ಷ ರೂ. ವೆಚ್ಚದಲ್ಲಿ ರಾಯಪುರ ಗ್ರಾಮದ ಹೊರವಲಯದಲ್ಲಿ ಶಾಲೆಗೆಂದು ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಯಿತು. ಆದರೆ ಕೊಠಡಿ ನಿರ್ಮಿಸಿ ಕೆಲ ವರ್ಷಗಳಲ್ಲಿ ಬುನಾದಿ ಕುಸಿದು ಗೋಡೆಗಳು ಬಿರುಕುಬಿಟ್ಟಿವೆ. ಇದರಿಂದ ಕೇವಲ ಎರಡು ವರ್ಷಗಳು ಮಾತ್ರ ವಿದ್ಯಾರ್ಥಿಗಳು ನೂತನ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಮರಳಿ ಹಳೇ ಕಟ್ಟಡಕ್ಕೆ ಸ್ಥಳಾಂತರಕ್ಕೆ ಗೊಂಡಿದ್ದಾರೆ. ನೂತನ ಕೊಠಡಿಗಳನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿರುವುದರಿಂದ ಕಟ್ಟಡ ಬಿರುಕುಬಿಟ್ಟಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅನಾಹುತವಾದರೆ ಯಾರು ಹೊಣೆ: ಜಿಲ್ಲೆಯ ಗಡಿಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸದಿರುವುದು ವಿಪರ್ಯಾಸ. ಗಡಿ ಗ್ರಾಮವಾದ ರಾಯಪುರ ಸರ್ಕಾರಿ ಶಾಲೆಗೆ ಪುಸ್ತಕ, ಸಮವಸ್ತ್ರ ಮಾತ್ರ ಸರಬರಾಜು ಮಾಡಿ ಶಿಕ್ಷಣ ಇಲಾಖೆ ಕೈತೊಳೆದುಕೊಂಡಂತೆ ಕಾಣುತ್ತದೆ. ಶಾಲೆ ದುಃಸ್ಥಿತಿ ಬಗ್ಗೆ ಗ್ರಾಮಸ್ಥರು, ಶಾಲೆ ಶಿಕ್ಷಕರು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಏನಾದರೂ ಅನಾಹುತ ನಡೆದರೆ ಯಾರು ಹೊಣೆ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ.

ರಾಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟು ಕೊಠಡಿಗಳಲ್ಲಿ ಐದು ಕೊಠಡಿ ಸಂಪೂರ್ಣ ದುರಸ್ತಿಯಲ್ಲಿದ್ದು ಬೀಗ ಹಾಕಲಾಗಿದೆ. ಇನ್ನುಳಿದ ಮೂರು ಕೊಠಡಿಗಳು ಸಹ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸೋರುತ್ತಿವೆ. ಈ ಬಗ್ಗೆ ಬಿಇಒ, ತಾಪಂ ಸೇರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಗಮನಕ್ಕೆ ತರಲಾಗಿದೆ.
– ಬಿ.ನಾಗೇಂದ್ರಪ್ಪ ಮುಖ್ಯಶಿಕ್ಷಕ

Leave a Reply

Your email address will not be published. Required fields are marked *