ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ

ಬಳ್ಳಾರಿ: ಅಸಂಘಟಿತ ಕಾರ್ಮಿಕರ ನೋವು, ನಲಿವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುವ ಮೂಲಕ ಅವರ ಅಭಿವೃದ್ಧಿಗಾಗಿ ನಾನಾ ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್(ಪಿಎಂಎಸ್‌ವೈಎಂ) ಯೋಜನೆಯಡಿ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ದೇಶದ 170 ಅಸಂಘಟಿತ ವಲಯದಲ್ಲಿ ಸುಮಾರು 42 ಕೋಟಿ ಕಾರ್ಮಿಕರಿದ್ದು, ಪ್ರತಿಯೊಬ್ಬರೂ ಯೋಜನೆಯ ಫಲಾನುಭವಿ ಆಗಬೇಕೆಂದು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ ಎಂದರು.

ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಅಲಿ ಮಾತನಾಡಿ, ಅಸಂಘಟಿತ ಕಾರ್ಮಿಕರು ಯೋಜನೆಯಡಿ ನೋಂದಣಿಯಾಗಬೇಕು. 18 ರಿಂದ 40 ವರ್ಷದೊಳಗಿನವರು 50-200ರೂ.ವರೆಗೆ ವಂತಿಗೆ ಪಾವತಿಸಬೇಕು. 60ವರ್ಷಗಳ ಬಳಿಕ ಪ್ರತಿ ತಿಂಗಳಿಗೆ ಮೂರು ಸಾವಿರ ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದರು. ಈ ವೇಳೆ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.