ಪಿಕೆಜಿಬಿ ನೌಕರರ ಮುಷ್ಕರ 16ಕ್ಕೆ

ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.16ರಂದು ಒಂದು ದಿನದ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಎಂ.ರಾಮಾರಾವ್ ತಿಳಿಸಿದರು.

ಮುಷ್ಕರ ಮುನ್ನ ಬ್ಯಾಂಕ್ ಆಡಳಿತ ಮಂಡಳಿಯಿಂದ ಸಿಬ್ಬಂದಿ ಮೇಲೆ ಆಗುತ್ತಿರುವ ದಬ್ಬಾಳಿಕೆ, ಬೇಡಿಕೆ ನಿರಾಕರಣೆ, ಕಾಯ್ದೆ ಉಲ್ಲಂಘನೆ, ನಿರ್ಲಕ್ಷೃದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜು.9ರಂದು ಬ್ಯಾಂಕ್‌ನ ಎಲ್ಲ ಶಾಖೆಗಳ ಮುಂದೆ ಭಿತ್ತಿ ಪತ್ರ ಪ್ರದರ್ಶನ ನಡೆಸಲಾಗುವುದು. ಜು.12ರಿಂದ 16ರವರೆಗೆ ಸುಮಾರು 50ಸಾವಿರಕ್ಕೂ ಹೆಚ್ಚು ಕರಪತ್ರ ಹಂಚಿಕೆ, ಮೈಕ್ ಮೂಲಕ ಪ್ರಚಾರ ಕೈಗೊಂಡು ಮುಷ್ಕರಕ್ಕೆ ಬೆಂಬಲಿಸುವಂತೆ ಕೋರಲಾಗುವುದು. ಜು.16ರಂದು ಪಿಕೆಜಿಬಿ ಪ್ರಧಾನ ಕಚೇರಿ ಮುಂದೆ 500ಕ್ಕೂ ಹೆಚ್ಚು ನೌಕರರಿಂದ ಮುಷ್ಕರ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಯಾಷ್ಯುವಲ್ ವರ್ಕರ್‌ಗಳ ಭವಿಷ್ಯ ನಿಧಿ ವಿಚಾರಣೆ ವಿರುದ್ಧ ಸಲ್ಲಿಸಿದ ರಿಟ್ ಅರ್ಜಿ ಹಿಂಪಡೆಯಬೇಕು. ಹೈಕೋರ್ಟ್ ಆದೇಶದಂತೆ ನಿವೃತ್ತಿ ವೇತನ ಜಾರಿಗೊಳಿಸಬೇಕು. ಟೆಂಪರರಿ ಸಬ್ ಸ್ಟಾಫ್ ನೌಕರರನ್ನು ಕಾಯಂಗೊಳಿಸಬೇಕು. ಕರ್ನಾಟಕದ ಎಲ್ಲ ಗ್ರಾಮೀಣ ಬ್ಯಾಂಕ್‌ಗಳನ್ನು ಪಿಕೆಜಿಬಿನಲ್ಲಿ ವಿಲೀನಗೊಳಿಸುವ ಬಗ್ಗೆ ಒಪ್ಪಿಗೆ ಪ್ರಕಟಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮುಷ್ಕರದಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.