ಶಿಕ್ಷಕರಿಂದ ದೇಶಕ್ಕೆ ಹಿರಿಮೆ

ಬಳ್ಳಾರಿಯಲ್ಲಿ ಶಿಕ್ಷಕರ ದಿನಾಚರಣೆ >>

ಬಳ್ಳಾರಿ: ತಂದೆ ತಾಯಿ ಹಾಗೂ ಗುರುವಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ನಗರದ ಗುರುಭವನ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಹಿರಿಮೆಗೆ ಶಿಕ್ಷಕರೇ ಕಾರಣ. ಆದರೆ, ನಾವು ಶಿಕ್ಷಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲರಿಗಿಂತ ಹೆಚ್ಚು ಶಿಕ್ಷಕರಿಗೆ ವೇತನ ನೀಡುವ ಅಗತ್ಯ ಇದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವೇತನ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಶಿಕ್ಷಕರಿಗೆ ಒಂದನೇ ತಾರೀಖಿಗೆ ವೇತನ ಕೊಡಿಸಲು ಪ್ರಯತ್ನಿಸಲಾಗುತ್ತದೆ. ಶಿಕ್ಷಕರ ಭವನವನ್ನು ಮಾದರಿಯಾಗಿ ನಿರ್ಮಿಸಬೇಕು. ಜಿಲ್ಲಾಡಳಿತದಿಂದ ಶಿಕ್ಷಕರಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಟೌನ್‌ಶಿಪ್‌ಗೆ ಎಸ್.ರಾಧಾಕಷ್ಣನ್ ಹೆಸರಿಟ್ಟರೆ ಸೂಕ್ತ ಎಂದು ಹೇಳಿದರು.

ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಎಪಿಜೆ ಅಬ್ದುಲ್ ಕಲಾಂ, ವಿದ್ಯಾರ್ಥಿ ಬೆಳಕು ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದರು.

ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದ (ಕೆಎಂಇಆರ್‌ಸಿ) ಅನುದಾನದಿಂದ ಜಿಲ್ಲೆಯ ಎಲ್ಲ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಗುರು ಭವನ ನಿರ್ಮಾಣಕ್ಕೆ 6.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನಗರದ ಬೈಪಾಸ್ ಬಳಿ ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಶಿಕ್ಷಕರಿಗಾಗಿ ಟೌನ್‌ಶಿಪ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಡಿ.1ರಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಟೌನ್‌ಶಿಪ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಎಲ್ಲ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಟೌನ್‌ಶಿಪ್ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿರುಮಲ, ಡಿಡಿಪಿಐ ಎ.ಶ್ರೀಧರನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮೇಯರ್ ಆರ್.ಸುಶೀಲಾ ಬಾಯಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶ್ ಇತರರಿದ್ದರು.

ಸಮಯ ಪಾಲನೆ ಇಲ್ಲ, ಗಣ್ಯರು ಗೈರು: ಬೆಳಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಆರಂಭವಾಗಿದ್ದು ಮಾತ್ರ ಮಧ್ಯಾಹ್ನ 12.30ಕ್ಕೆ. ಜಿಲ್ಲಾಧಿಕಾರಿ ಬರುವುದು ತಡವಾಗಿದ್ದರಿಂದ ಕಾರ್ಯಕ್ರಮ ವಿಳಂಬವಾಗಿ ಆರಂಭವಾಯಿತು. ಶಾಸಕ ಜಿ.ಸೋಮಶೇಖರರೆಡ್ಡಿ, ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಹಾಗೂ ಇತರೆ ಗಣ್ಯರು ಸುಮಾರು 45 ನಿಮಿಷ ಜಿಲ್ಲಾಧಿಕಾರಿಗಾಗಿ ಕಾಯುತ್ತಾ ಕುಳಿತಿದ್ದರು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಂಸದರು, ಶಾಸಕರು ಗೈರಾಗಿದ್ದರು.