ಜನರಿಗೆ ನೆರವಾಗುವ ಕ್ರಿಯಾಯೋಜನೆ ಸಲ್ಲಿಸಿ

>

ಬಳ್ಳಾರಿ: ಜಿಲ್ಲೆಯ ಗಣಿ ಪ್ರದೇಶಾಭಿವೃದ್ಧಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಿಯಾಯೋಜನೆ ನೀಡುವಂತೆ ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಶಾಸಕರನ್ನು ಕೋರಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ಗಣಿಬಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ 10 ವರ್ಷಗಳ ಕ್ರಿಯಾಯೋಜನೆ ರೂಪಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಶಾಸಕರ ಸಭೆಯಲ್ಲಿ ಮಾತನಾಡಿದರು. ನಿಮ್ಮ ಕ್ಷೇತ್ರಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೂಕ್ತ ಹಾಗೂ ಜನರಿಗೆ ನೇರವಾಗಿ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲು ಕ್ರಿಯಾಯೋಜನೆ ರೂಪಿಸಿ ಎರಡು ದಿನದೊಳಗೆ ನೀಡಬೇಕು. ಶಾಸಕರು ನೀಡುವ ಕ್ರಿಯಾಯೋಜನೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು. ಗಣಿಬಾಧಿತ ತಾಲೂಕುಗಳಾದ ಸಂಡೂರು, ಬಳ್ಳಾರಿ, ಹೊಸಪೇಟೆ ಹೊರತುಪಡಿಸಿ ಜಿಲ್ಲೆಯ ಇತರೆ ತಾಲೂಕುಗಳನ್ನು ಪ್ರತಿನಿಧಿಸುವ ಶಾಸಕರು ತಲಾ 300 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ ಕೊಡಬೇಕೆಂದು ಮನವಿ ಮಾಡಿದರು.

ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಭೀಮಾನಾಯ್ಕ, ಇ.ತುಕಾರಾಂ, ಪಿ.ಟಿ.ಪರಮೇಶ್ವರ ನಾಯ್ಕ, ಜೆ.ಎನ್.ಗಣೇಶ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಸಿಇಒ ಕೆ.ವಿ.ರಾಜೇಂದ್ರ, ಡಿಸಿಎಫ್ ರಮೇಶ ಕುಮಾರ್ ಹಾಜರಿದ್ದರು.