ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ

ಬಳ್ಳಾರಿ: ಉಪ ಚುನಾವಣೆಗಳ ಬಳಿಕ ಅತಂತ್ರ ರಾಜಕೀಯ ಅತಂತ್ರ ಪರಿಸ್ಥಿತಿ ಅಂತ್ಯವಾಗಲಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್-ಕಾಂಗ್ರೆಸಿನವರು ಹಾವು ಮುಂಗುಸಿಯಂತಿದ್ದರು. ಅವರಪ್ಪನಾಣೆಗೂ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯಗೆ ಇದೀಗ ಜೆಡಿಎಸ್ ಮರ್ಜಿ ಕಾಯುವ ಪರಿಸ್ಥಿತಿ ಬಂದಿದೆ. ರಾಜ್ಯದ ಯಾವ ನಾಯಕರಿಗೂ ಸಿದ್ದರಾಮಯ್ಯ ಪರಿಸ್ಥಿತಿ ಬರಬಾರದು ಎಂದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ವಯಂಘೋಷಿತ ಮಣ್ಣಿನ ಮಗನಾದರೆ, ಸಿದ್ದರಾಮಯ್ಯ ಭಂಡತನದ ರಾಜಕೀಯ ಮಾಡುತ್ತಿದ್ದಾರೆ. ಧರ್ಮಸ್ಥಳದ ಬದಲಿಗೆ ಸಿದ್ದರಾಮಯ್ಯ ಬೇರೆ ಆಸ್ಪತ್ರೆಗೆ ದಾಖಲಾಗಬೇಕಿತ್ತು. ದೇಸಿ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹೆಣ್ಣಿನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಹೆಣ್ಣಿಗೆ ಅವಮಾನ ಮಾಡುವುದನ್ನು ಮುಂದುವರಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಮೂರು ಸ್ಥಾನಕ್ಕೆ ಇಳಿಯಬೇಕಾಗುತ್ತದೆ ಎಂದರು.

100 ತಪ್ಪು ಮಾಡಿದ್ದರೂ ಕ್ಷಮಿಸಬಹುದು. ಆದರೆ, 420 ಪದ ಬಳಸಿರುವ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು. ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಹಿಂದುಳಿದವರಿಗೆ ಒಳ್ಳೆಯದು ಮಾಡಿಲ್ಲ. ಭಾರತೀಯ ಸಂಸ್ಕೃತಿಗೆ ಧಕ್ಕೆ ತಂದವರೆಲ್ಲ ಸುಟ್ಟು ಭಸ್ಮವಾಗಿದ್ದಾರೆ. ಧರ್ಮ ರಾಜಕಾರಣದಿಂದ ಕಾಂಗ್ರೆಸಿನವರು ಅಧಿಕಾರ ಕಳೆದುಕೊಂಡಿದ್ದಾರೆ. ಬಿಜೆಪಿ ಮುಗಿಸಲು ಸಿದ್ದರಾಮಯ್ಯರಷ್ಟೇ ಅಲ್ಲ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹಾಗೂ ಅವರಪ್ಪನಿಂದಲೂ ಸಾಧ್ಯವಾಗಿಲ್ಲ ಎಂದರು.

ರಾಜ್ಯದಲ್ಲಿ ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಸರ್ಕಾರ ಇದೆ. ಅಧಿಕಾರ ಕಳೆದುಕೊಂಡಿದ್ದರೂ ಕಾಂಗ್ರೆಸಿನವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸಿನಲ್ಲಿ ಅಶಿಸ್ತು ತಾಂಡವವಾಡುತ್ತಿದ್ದರೂ ಪೇಪರ್ ಟೈಗರ್ ಆಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೌನವಾಗಿದ್ದಾರೆ. ಕಾಂಗ್ರೆಸಿನಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರು ಹಪಾಹಪಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಬಳ್ಳಾರಿ ಕ್ಷೇತ್ರದಲ್ಲಿ ಯಾರು ಹೆಚ್ಚಿನ ಮತ ಕೊಡಿಸುತ್ತಾರೋ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದೆ. ಅನೇಕ ಕಾಂಗ್ರೆಸ್ ಶಾಸಕರು ಪಕ್ಷ ಬಿಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದರು.

ಶಾಸಕರಾದ ಜಿ.ಸೋಮಶೇಖರರೆಡ್ಡಿ, ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಎನ್.ರವಿಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಾಜಿ ಸಂಸದ ಎಸ್.ಪಕ್ಕೀರಪ್ಪ, ಮುಖಂಡರಾದ ಡಾ.ಎಸ್‌ಜೆವಿ ಮಹಿಪಾಲ್, ಕೆ.ಎ.ರಾಮಲಿಂಗಪ್ಪ, ವಿ.ಕೆ.ಬಸ್ಸಪ್ಪ ಇತರರಿದ್ದರು.