ಎಚ್‌ಎಲ್‌ಸಿಗೆ ನೀರು ಬಿಡಲು ಪಟ್ಟು

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಎಚ್‌ಎಲ್‌ಸಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ತುಂಗಭದ್ರಾ ರೈತ ಸಂಘ ನಗರ ಹೊರವಲಯದ ಅಲ್ಲಿಪುರ ಎಚ್‌ಎಲ್ ಕಾಲುವೆ ಬಳಿ ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿತು.

ಎಚ್‌ಎಲ್‌ಸಿ ವ್ಯಾಪ್ತಿಯಲ್ಲಿ ಅಂದಾಜು ಒಂದು ಲಕ್ಷ ಎಕರೆಯಲ್ಲಿ ರೈತರು ಹತ್ತಿ, ಮೆಣಸಿನಕಾಯಿ, ಭತ್ತ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಡಿ.5ಕ್ಕೆ ಜಲಾಶಯದಿಂದ ಕಾಲುವೆಗೆ ಬಿಡುವ ನೀರು ಸ್ಥಗಿತಗೊಳಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನ.18ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಚ್‌ಎಲ್‌ಸಿಗೆ ಡಿ.6 ರಿಂದ 30ರವರೆಗೆ ನಿಂತ ಬೆಳೆಗೆ ನೀರು ಬಿಡಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಆದರೆ ಜಲಾಶಯದ ಮುಖ್ಯ ಅಧಿಕಾರಿ ಮಂಜಪ್ಪ, ನೀರಿನ ಕೊರತೆ ಇರುವುದರಿಂದ ಕೆಲ ದಿನ ಸ್ಥಗಿತಗೊಳಿಸಿ ನೀರು ಬಿಡಲಾಗುವುದಾಗಿ ಹೇಳಿದ್ದಾರೆ. ಇದರಿಂದ ರೈತರು ಬೆಳೆದ ಬೆಳೆಗಳು ಒಣಗಲಿದ್ದು, ಕೈಗೆಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಎಚ್‌ಎಲ್‌ಸಿಗೆ ನೀರು ಬಿಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘ ಜಿಲ್ಲಾ ಅಧ್ಯಕ್ಷ ಜಿ.ಪುರುಷೋತ್ತಮ ಗೌಡ, ರೈತರಾದ ಗಂಗಾವತಿ ವೀರೇಶ್, ಮಸೀದಿಪುರ ಬಸವನಗೌಡ ಇತರರಿದ್ದರು.

ಟ್ರಾಫಿಕ್ ಜಾಮ್: ಅಲ್ಲಿಪುರದ ಎಚ್‌ಎಲ್‌ಸಿ ಬಳಿ ರೈತರಿಂದ ಕೆಲ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಿಮೀಗಟ್ಟಲೇ ವಾಹನಗಳು ನಿಂತು ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು, ವಾಹನ ಸವಾರರು ತೊಂದರೆ ಅನುಭವಿಸಿದರು.