ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಗೋ. ಮಧುಸೂದನ್​

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಬಿಜೆಪಿ ಉಸ್ತುವಾರಿ ರಾಮುಲು ಹಾಗೂ ಕಾಂಗ್ರೆಸ್ ಉಸ್ತುವಾರಿ ಡಿ.ಕೆ.ಶಿವಕುಮಾರ್ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ್ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೋ. ಮಧುಸೂದನ್​, ರಾಜಕೀಯ ಸ್ಪರ್ಧೆ ಏನೇ ಇರಲಿ, ಧರ್ಮ ರಾಜಕಾರಣದ ತಪ್ಪನ್ನು ಒಪ್ಪಿಕೊಂಡಿರುವುದಕ್ಕೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರದ ಮೇಲೆ ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸಿನವರು ಜಾತಿ ರಾಜಕಾರಣದ ಪಿತೂರಿ ನಡೆಸಿದರು. ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೆಕ್ಷನ್ 153 ಎ ಅಡಿ ಪ್ರಕರಣ ದಾಖಲಾಗಬೇಕು. ಉಪ ಚುನಾವಣೆಯಲ್ಲೂ ಕಾಂಗ್ರೆಸ್ ನಾಯಕರು ನಾಯಕ ಸಮುದಾಯದಲ್ಲಿ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಶಾಂತರಾಮ, ಸಹ ವಕ್ತಾರ ಶ್ರೀನಾಥ, ಮುಖಂಡರಾದ ಕೃಷ್ಣರೆಡ್ಡಿ ಹಾಗೂ ಇತರರಿದ್ದರು.