ಬಿಟಿಪಿಎಸ್‌ಗೆ ನೀರು-ಮರಳಿಹಳ್ಳವೇ ಆಸರೆ

<< ಐಸಿಸಿ ಸಭೆಯಲ್ಲಿ ನೀರು ನಿಗದಿಯಿಲ್ಲ > ಪ್ರತಿ ವರ್ಷ ಸರ್ಕಾರಕ್ಕೆ ಕೋರಿಕೆ ಸಲ್ಲಿಸುವ ಅನಿವಾರ್ಯತೆ>>

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆಯಿಂದ ಖಾಸಗಿ ಕಾರ್ಖಾನೆಗಳಿಗೆ ವಾರ್ಷಿಕ ನಿಗದಿಯಂತೆ ನೀರಿನ ಹಂಚಿಕೆಯಾಗುತ್ತದೆ. ಆದರೆ, ಸರ್ಕಾರಿ ಸ್ವಾಮ್ಯದ ಬಿಟಿಪಿಎಸ್‌ಗೆ ಮಾತ್ರ ಶಾಶ್ವತವಾಗಿ ನೀರಿನ ಹಂಚಿಕೆ ಮರೀಚಿಕೆಯಾಗಿದೆ.

ಬಿಟಿಪಿಎಸ್‌ನಲ್ಲಿ 0.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೆರೆ ಇದೆ. 1700 ಮೆಗಾವಾಟ್ ಸಾಮರ್ಥ್ಯದ ಎಲ್ಲ ಮೂರು ಘಟಕಗಳಲ್ಲಿ ನಿರಂತರ ವಿದ್ಯುತ್ ಉತ್ಪಾದನೆಗೆ ನಿತ್ಯ 1.45 ಲಕ್ಷ ಕ್ಯೂಬಿಕ್ ಮೀಟರ್ ನೀರಿನ ಅಗತ್ಯ ಇದೆ. ಆದರೆ, ನೀರಾವರಿ ಸಲಹಾ ಸಮಿತಿಯಲ್ಲಿ ಬಿಟಿಪಿಎಸ್‌ಗೆ ಪ್ರತ್ಯೇಕವಾಗಿ ನೀರಿನ ಹಂಚಿಕೆ ಮಾಡಿಲ್ಲ. ಬಿಟಿಪಿಎಸ್‌ಗೆ ವಾರ್ಷಿಕ 2.04 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕೋರಿ ಕೆಪಿಸಿಎಲ್‌ನಿಂದ ಪ್ರತಿವರ್ಷ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಈ ಮೂಲಕ ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಆಧರಿಸಿ ಬಿಟಿಪಿಎಸ್‌ಗೆ ನೀರು ಬಿಡಲಾಗುತ್ತದೆ. ಸರ್ಕಾರ ಶಾಶ್ವತವಾಗಿ ನೀರಿನ ಹಂಚಿಕೆ ಮಾಡದಿರುವುದರಿಂದ ಬಿಟಿಪಿಎಸ್ ಪ್ರತಿ ವರ್ಷ ಕೋರಿಕೆ ಸಲ್ಲಿಸುವುದು ಅನಿವಾರ್ಯವಾಗಿದೆ.

ಬಿಟಿಪಿಎಸ್‌ಗೆ ಗಂಗಾವತಿ ಬಳಿಯ ಮರಳಿಹಳ್ಳವೇ ಶಾಶ್ವತ ನೀರಿನ ಮೂಲವಾಗಿದೆ. ಕೃಷಿಗೆ ಬಳಕೆ ಮಾಡಿದ ಬಳಿಕ ಸಂಗ್ರಹಗೊಳ್ಳುವ ನೀರನ್ನು ಬಿಟಿಪಿಎಸ್ ಪಡೆಯುತ್ತದೆ. ಕೃಷಿ ಚಟುವಟಿಕೆ ಇಲ್ಲದಿದ್ದಾಗ ಬಿಟಿಪಿಎಸ್‌ಗೆ ನೀರಿನ ಸಂಕಷ್ಟ ಎದುರಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಕುಡಿಯುವುದಕ್ಕಾಗಿ ನಾಲೆಗೆ ನೀರು ಹರಿಸಿದಾಗ ಅದರಲ್ಲೇ ಬಿಟಿಪಿಎಸ್ ಪಾಲು ಪಡೆದಿದ್ದೂ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಲ ಸಂಕಷ್ಟದಿಂದ ಪಾರಾಗಲು ನೀರಿನ ಹಂಚಿಕೆ ಮಾಡುವಂತೆ ಕೆಪಿಸಿಎಲ್ ಮೂಲಕ ಈ ವರ್ಷವೂ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಬಿಟಿಪಿಎಸ್ ಮೂಲಗಳು ತಿಳಿಸಿವೆ.

ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆ, ಗಾಳಿ ಇರುವುದರಿಂದ ಜಲ ಹಾಗೂ ಪವನ ಶಕ್ತಿ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಟಿಪಿಎಸ್‌ನ ಮೂರೂ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಉತ್ಪಾದನೆ ಆತಂಭಿಸಿದರೆ, ಬಿಟಿಪಿಎಸ್ ಜಲ ಸಂಗ್ರಹಾಗಾರದಲ್ಲಿ 17 ದಿನಗಳಿಗೆ ಆಗುವಷ್ಟು ನೀರಿದೆ. ಆದರೆ, ಸರ್ಕಾರ ತುಂಗಭದ್ರಾ ಅಣೆಕಟ್ಟೆಯಿಂದ ನಿರ್ದಿಷ್ಟವಾಗಿ ನೀರಿನ ಹಂಚಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಟಿಪಿಎಸ್ ಜಲ ಕ್ಷಾಮಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.

ಯಥೇಚ್ಛ ಕಲ್ಲಿದ್ದಲು..!: ಬಿಟಿಪಿಎಸ್‌ನ ಮೂರೂ ಘಟಕಗಳು ಸ್ಥಗಿತವಾಗಿರುವುದರಿಂದ ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಸಂಗ್ರಹವಾಗಿದೆ. ಬಿಟಿಪಿಎಸ್‌ನಲ್ಲಿ ಮೂರು ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾಡಬಹುದಾದ ಕಲ್ಲಿದ್ದಲು ಸಂಗ್ರಹಗಾರ ಇದೆ. ಇದೀಗ 2.3 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಾಗಿದ್ದು, ನಿಗದಿಯಂತೆ ಕಲ್ಲಿದ್ದಲು ಪೂರೈಕೆಯಾದರೆ ಸಂಗ್ರಹಗಾರ ಭರ್ತಿಯಾಗುವ ಸಾಧ್ಯತೆ ಇದೆ. 1700 ಮೆಗಾವಾಟ್ ಸಾಮರ್ಥ್ಯದ ಮೂರು ಘಟಕಗಳು ಕಾರ್ಯ ನಿರ್ವಹಿಸಿದರೆ ನಿತ್ಯ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ. ವಿದ್ಯುತ್ ಬೇಡಿಕೆ ಇಲ್ಲದಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಬಿಟಿಪಿಎಸ್‌ನ ಮೂರೂ ಘಟಕಗಳು ಕಾರ್ಯ ನಿರ್ವಹಿಸುವ ಸಾಧ್ಯತೆಗಳಿಲ್ಲ. ಇದರಿಂದಾಗಿ ಬಿಟಿಪಿಎಸ್‌ಗೆ ಸರಬರಾಜು ಆಗುವ ಕಲ್ಲಿದ್ದಲಿನ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಬಿಟಿಪಿಎಸ್‌ಗೆ ನಿತ್ಯ 50ರಿಂದ 60 ಕ್ಯೂಸೆಕ್ ನೀರು ಬಿಟ್ಟರೆ ಅನುಕೂಲವಾಗಲಿದೆ. ಒಟ್ಟಾರೆ 0.5ರಿಂದ 0.6 ಟಿಎಂಸಿ ನೀರು ಹಂಚಿಕೆಯಾದರೆ 2019ರ ಮಾರ್ಚ್‌ವರೆಗೆ ನಿರ್ವಹಣೆ ಮಾಡಬಹುದಾಗಿದೆ. ತುಂಗಭದ್ರಾ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಬಿಟಿಪಿಎಸ್‌ಗೆ ಅಗತ್ಯಕ್ಕೆ ಅನುಗುಣವಾಗಿ ನೀರು ಸಿಗುವ ಎಲ್ಲ ಸಾಧ್ಯತೆಗಳಿವೆ. ಸದ್ಯಕ್ಕೆ ನೀರು, ಕಲ್ಲಿದ್ದಲಿನ ಯಾವುದೇ ಸಮಸ್ಯೆ ಇಲ್ಲ. ವಿದ್ಯುತ್ ಬೇಡಿಕೆ ಇಲ್ಲದಿರುವುದರಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
– ಸೂರ್ಯನಾರಾಯಣ ಬಿಟಿಪಿಎಸ್ ಮುಖ್ಯಇಂಜಿನಿಯರ್