<< ದೇಗುಲ ಸುತ್ತ ಗಣಿಗಾರಿಕೆ ಹಿನ್ನೆಲೆ> ಸಾಧಕ-ಬಾಧಕಗಳ ಪರಿಶೀಲನೆ>>
ಕೆ.ಪ್ರಲ್ಹಾದ
ಸಂಡೂರು: ದಾಲ್ ಒಡೆನತನದ ನಂದಿ ಮೈನಿಂಗ್ ಕಂಪನಿ ಗಣಿಗುತ್ತಿಗೆ ಪ್ರದೇಶದಲ್ಲಿ ಬ್ಲಾಸ್ಟಿಂಗ್ನಿಂದಾಗುವ ಸಾಧಕ-ಬಾಧಕಗಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ‘ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಸಂ’(ಎನ್ಐಆರ್ಎಂ) ತಂಡಕ್ಕೆ ಗಣಿ-ಭೂವಿಜ್ಞಾನ ಇಲಾಖೆಯು ಜೂ.29ರಂದು ವರ್ಕ್ ಆರ್ಡರ್ ನೀಡಿದ್ದು, ತಜ್ಞರು ಶೀಘ್ರದಲ್ಲೇ ಇಲ್ಲಿಗೆ ಬರಲಿದ್ದಾರೆ.
ಈಗಾಗಲೇ ನಂದಿ ಮೈನಿಂಗ್ ಕಂಪನಿ ಅದಿರು ಉತ್ಪಾದನೆ ಆರಂಭಿಸಿದ್ದು, ಇದೊಂದು ಸರ್ಕಾರದ ಕಣ್ಣೊರೆಸುವ ತಂತ್ರವಷ್ಟೆ. ಗಣಿಗಾರಿಕೆಗೆ ಅವಕಾಶ ನೀಡುವ ಮುನ್ನವೆ ಈ ಪರಿಶೀಲನೆ ನಡೆಸ ಬೇಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೂ ಮೊದಲು 2017ರ ಅ.3ರಂದು ರಾಜ್ಯ ಪುರಾತತ್ವ ಇಲಾಖೆ ಆಯುಕ್ತೆ ಡಾ.ಮಂಜುಳಾ ಮತ್ತು ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿ ಸಲಿದೆ ಎಂದು ಹೇಳಲಾಗಿತ್ತು. ಆದರೆ, ಆಯುಕ್ತರು ಮಾತ್ರ ಬಂದು ಹೋಗಿದ್ದರು. ಈ 10 ತಿಂಗಳ ವಿಳಂಬಕ್ಕೆ ಕಾರಣವೇನು ಎಂಬುದನ್ನು ಸರ್ಕಾರವೇ ಉತ್ತರಿಸ ಬೇಕು. ಈಗಾಗಲೆ ಬ್ಲಾಸ್ಟಿಂಗ್ನಿಂದಾಗಿ ಕುಮಾರಸ್ವಾಮಿ, ಪಾರ್ವತಿ ದೇಗುಲದ ಗೋಡೆ ಗಳಲ್ಲಿ ಬಿರುಕು ಕಾಣಿಸಿವೆ. ಗಣಿಗುತ್ತಿಗೆ ಪ್ರದೇಶದ ಸಮೀಪವಿರುವ ಎದುರು ಬಸವಣ್ಣನ ಗುಡಿಯಂತೂ ಸಂಪೂರ್ಣ ನಾಶವಾಗಿದ್ದು, ಗಣಿ ರಾಕ್ಷಸತ್ವಕ್ಕೆ ಸಾಕ್ಷಿಯಾಗಿದೆ.
ಸಂಡೂರಿನ ಸ್ವಾಮಿಮಲೆ ಅರಣ್ಯ ಬೆಟ್ಟದಲ್ಲಿರುವ ಕುಮಾರಸ್ವಾಮಿ, ಪಾರ್ವತಿ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜತೆಗೆ ಪೌರಾಣಿಕ, ಧಾರ್ಮಿಕ ಪರಂಪರೆ ಇರುವ ಈ ದೇಗುಲವು ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕ ವಾಗಿದೆ. ಅಪಾರ ಅರಣ್ಯ, ಖನಿಜ ಹಾಗು ಜೀವವೈವಿಧ್ಯ ಸಂಪತ್ತಿ ರುವ ಕುಮಾರಸ್ವಾಮಿ-ಪಾರ್ವತಿ ದೇಗುಲಗಳ ಎರಡು ಕಿಮೀ ವ್ಯಾಪ್ತಿ ಗಣಿಗಾರಿಕೆ ನಿಷೇಧಿಸಬೇಕೆಂದು ಹಿಂದಿನಿಂದಲೂ ಜನ ಸಂಗ್ರಾಮ ಪರಿಷತ್, ಸಂಘಟನೆಗಳು ಹೋರಾಡುತ್ತಲೇ ಇವೆ.
ಮಣಿದ ಸಿಎಂಗಳು : 1978ರ ಪುರಾತತ್ವ ಕಾಯ್ದೆಯಂತೆ ಐತಿಹಾಸಿಕ- ಪಾರಂಪರಿಕ ತಾಣಗಳ ಎರಡು ಕಿಮೀ ವ್ಯಾಪ್ತಿ ಗಣಿಗಾರಿಕೆ ನಡೆಸುವಂತಿಲ್ಲ. ಪ್ರಭಾವಿಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ರಾಜ್ಯ ಸರ್ಕಾರ, 1978ರ ಪುರಾತತ್ವ ಕಾಯ್ದೆಯನ್ನು 2015ರ ಡಿಸೆಂಬರ್ನಲ್ಲಿ ಹಿಂಪಡೆದು, ಎರಡು ಕಿಮೀ ವ್ಯಾಪ್ತಿಯನ್ನು ಕೇವಲ 300 ಮೀಟರ್ಗೆ ಇಳಿಸಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಈಗಿನ ಸಿಎಂ ಎಚ್.ಡಿ.ಕುಮಾರಸ್ವಾಮಿ, ಚುನಾವಣೆ ಪೂರ್ವದಲ್ಲಿ ಇಲ್ಲಿಗೆ ಆಗಮಿಸಿದ್ದಾಗ ‘ಅಧಿಕಾರಕ್ಕೆ ಬಂದಾಕ್ಷಣ ಎರಡು ಕಿಮೀ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ’ ಎಂದಿದ್ದರು.
ಗಣಿಗಾರಿಕೆಯಿಂದ ದೇಗುಲ ಮತ್ತು ಸುತ್ತಲಿನ ಪರಿಸರಕ್ಕೆ ಆಗುವ ಪರಿಣಾಮಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಗಣಿ-ಭೂ ವಿಜ್ಞಾನ ಇಲಾಖೆ ಸೂಚಿಸಿದೆ. ಯಾರದೆ ಒತ್ತಡಕ್ಕೆ ಮಣಿಯದೆ ವಸ್ತುಸ್ಥಿತಿಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
– ಎಚ್.ವೆಂಕಟೇಶ್ ವಿಜ್ಞಾನಿ ಹಾಗೂ ಮುಖ್ಯಸ್ಥರು, ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಸಂ ಬೆಂಗಳೂರುಕುಮಾರಸ್ವಾಮಿ ದೇಗುಲದಿಂದ 1 ಕಿಮೀ ಹೊರತುಪಡಿಸಿ ಗಣಿಗಾರಿಕೆ ನಡೆಸಬೇಕು. ತಜ್ಞರತಂಡ ಸರ್ಕಾರಕ್ಕೆ ವರದಿ ನೀಡುವವರೆಗೂ ಬ್ಲಾಸ್ಟಿಂಗ್ ರಹಿತ ಗಣಿಗಾರಿಕೆ ನಡೆಸಬೇಕೆಂಬ ಷರತ್ತಿನ ಆಧಾರದ ಮೇಲೆ ಅನುಮತಿ ನೀಡಲಾಗಿದೆ.
– ಮಹಾವೀರ್ ಉಪ ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹೊಸಪೇಟೆಕುಮಾರಸ್ವಾಮಿ ದೇಗುಲ ಸುತ್ತ ಎರಡು ಕಿಮೀ ಗಣಿಗಾರಿಕೆ ನಿಷೇಧಿಸಬೇಕು. ಜತೆಗೆ ಹರಿಶಂಕರ, ನವಿಲುಸ್ವಾಮಿ, ರಾಮಘಡದ ರಾಮಸ್ವಾಮಿ ಸೇರಿ ತಾಲೂಕಿನ 13 ದೇಗುಲಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಬೇಕು.
– ಟಿ.ಎಂ.ಶಿವಕುಮಾರ್ ಮತ್ತು ಎ.ಜೆ.ಶ್ರೀಶೈಲ ಜನಸಂಗ್ರಾಮ ಪರಿಷತ್ ಮುಖಂಡರು, ಸಂಡೂರು