ತುಂಗಭದ್ರಾ ಅಚ್ಚುಕಟ್ಟಿಗೆ ಆಶಾದಾಯಕ ಮುಂಗಾರು

<<ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ > ಟಿಬಿ ಡ್ಯಾಮ್ ಒಳಹರಿವು ಹೆಚ್ಚಳ ನಿರೀಕ್ಷೆ>>

ಅಶೋಕ ನೀಮಕರ್

ಬಳ್ಳಾರಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಪ್ರಸಕ್ತ ಮುಂಗಾರು ಸಂಭ್ರಮದ ವಾತಾವರಣ ಸೃಷ್ಟಿಸಿದೆ. ತ್ರಿವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರ ಜತೆಗೆ ತುಂಗಭದ್ರಾ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.

ಪ್ರಸಕ್ತ ವರ್ಷ ಮೇನಲ್ಲಿ ತುಂಗಭದ್ರಾ ಅಣೆಕಟ್ಟೆಗೆ ಒಳಹರಿವು ಆರಂಭವಾಗಿದೆ. ಮೇ 20ರಂದು 12 ಕ್ಯೂಸೆಕ್ ಮೂಲಕ ಆರಂಭವಾದ ಒಳಹರಿವು ಜೂ.2ರಂದು 2036 ಕ್ಯೂಸೆಕ್ ತಲುಪಿತ್ತು. ನಂತರದ ದಿನಗಳಲ್ಲಿ ಒಳಹರಿವಿನಲ್ಲಿ ಏರಿಳಿತವಾಗುತ್ತಿದ್ದರೂ ಅಣೆಕಟ್ಟೆಗೆ ನಿರಂತರವಾಗಿ ನೀರು ಹರಿದುಬರುತ್ತಿದೆ. ಕಳೆದ ವರ್ಷ ಜೂ.10ರಂದು ಒಳಹರಿವು ಆರಂಭವಾಗಿತ್ತು.

ಸೋಮವಾರ (ಜೂ.11) ತುಂಗಭದ್ರಾ ಅಣೆಕಟ್ಟೆಯಲ್ಲಿ 4.67 ಟಿಎಂಸಿ ನೀರು ಸಂಗ್ರಹ ಇದ್ದು, 583 ಕ್ಯೂಸೆಕ್ ಒಳಹರಿವಿತ್ತು. ಕಳೆದ ವರ್ಷ ಈ ಸಂದರ್ಭದಲ್ಲಿ ಅಣೆಕಟ್ಟೆಯಲ್ಲಿ ಕೇವಲ 0.93 ಟಿಎಂಸಿ ನೀರಿದ್ದು 11 ಕ್ಯೂಸೆಕ್ ಒಳಹರಿವಿತ್ತು. 2016ರಲ್ಲಿ ಅಣೆಕಟ್ಟೆಗೆ ಮೇ 29ರಂದು 386 ಕ್ಯೂಸೆಕ್ ಮೂಲಕ ಒಳಹರಿವು ಆರಂಭವಾಗಿತ್ತು. 2015ರಲ್ಲಿ ಏ.30, 2014ರಲ್ಲಿ ಏ.26, 2013ರಲ್ಲಿ ಮೇ 10, 2012ರಲ್ಲಿ ಏ.19ಕ್ಕೆ ಒಳಹರಿವಿದ್ದರೂ ಅದು ತಾತ್ಕಾಲಿಕ ಎನ್ನುವಂತಾಗಿತ್ತು.

ಆದರೆ, ಪ್ರಸ್ತುತ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಸೇರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಭಾರೀ ಪ್ರಮಾಣದ ಒಳಹರಿವನ್ನು ನಿರೀಕ್ಷಿಸಲಾಗಿದೆ. ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿರುವುದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ವರದಾನವಾಗಿದೆ. ತುಂಗಾ ಜಲಾಶಯ ಭರ್ತಿ ಹಿನ್ನೆಲೆ ಎಲ್ಲ ಐದು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 9400 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಸಿಂಗಟಾಲೂರು ಜಲಾಶಯದ ಮೂಲಕ ತುಂಗಭದ್ರಾ ಅಣೆಕಟ್ಟೆ ಸೇರಲಿದೆ.
63.04 ಟಿಎಂಸಿ ಸಾಮರ್ಥ್ಯದ ಭದ್ರಾ ಅಣೆಕಟ್ಟೆಗೂ ಒಳಹರಿವು ಹೆಚ್ಚಿದ್ದು 5.23 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಭದ್ರಾ ಅಣೆಕಟ್ಟೆಯಲ್ಲಿ ಕೇವಲ 0.34 ಟಿಎಂಸಿ ನೀರು ಸಂಗ್ರಹವಾಗಿತ್ತು ಎಂಬುದು ಗಮನಾರ್ಹ. ಭದ್ರಾ ಅಣೆಕಟ್ಟೆ ಶೀಘ್ರ ಭರ್ತಿಯಾದರೆ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗುವ ಸಾಧ್ಯತೆಗಳಿವೆ.

ಉತ್ತಮ ಮಳೆ: ತ್ರಿವಳಿ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ಜೂನ್ ತಿಂಗಳಲ್ಲಿ ಕೊಪ್ಪಳ ಜಿಲೆಯಲ್ಲಿ 64, ಬಳ್ಳಾರಿ 54 ಹಾಗೂ ರಾಯಚೂರು ಜಿಲ್ಲೆಯಲ್ಲಿ 50 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಕ್ರಮವಾಗಿ 110, 93, 91 ಪ್ರತಿಶತ ಹೆಚ್ಚು ಆಗಿದೆ. ಮೇ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ಮೇ ತಿಂಗಳ ಮಳೆ ಕೊರತೆಯನ್ನು ಜೂನ್ ಸರಿದೂಗಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಮುಂಗಾರು ಉತ್ತಮವಾಗಿದೆ. ಆದರೆ, ಹವಾಮಾನ ಇಲಾಖೆ ಪ್ರಕಾರ ಒಟ್ಟಾರೆ ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎಲ್ಲರೂ ಭತ್ತ ಬೆಳೆಯುವ ಬದಲಿಗೆ ನೀರಿನ ಲಭ್ಯತೆ ಆಧರಿಸಿ ವೈವಿಧ್ಯಮಯ ಬೆಳೆ ಬೆಳೆದರೆ ಸೂಕ್ತ.
– ಡಿ.ರಂಗಾರೆಡ್ಡಿ ತುಂಗಭದ್ರಾ ಮಂಡಳಿ ಅಧ್ಯಕ್ಷ

Leave a Reply

Your email address will not be published. Required fields are marked *