ಕ್ಷಮೆಯಾಚನೆಗೆ ರೈತರ ಪಟ್ಟು

<< ಸಿಎಂ ವಿರುದ್ಧ ರೈತ ಸಂಘ-ಹಸಿರು ಸೇನೆ ಪ್ರತಿಭಟನೆ > ಆ.15ರಂದು ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ >>

ಹೊಸಪೇಟೆ: ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಜಿಲ್ಲಾ ಘಟಕ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಗೋಣಿ ಬಸಪ್ಪ ಮಾತನಾಡಿ, ವಿಧಾನಸೌಧದಲ್ಲಿ ನಡೆದ ರೈತರ ಸಭೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಮನೆಗೆ ಋಣಪತ್ರ ತಲುಪಿಸುವ ವಾಗ್ದಾನ ಮಾಡಿದ್ದ ಸಿಎಂ ಕುಮಾರಸ್ವಾಮಿ, ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಜೆಟ್‌ನಲ್ಲಿ ಅಲ್ಪಸ್ವಲ್ಪ ರೈತರ ಸಾಲಮನ್ನಾ ಮಾಡುವ ಮೂಲಕ ಮಾತು ತಪ್ಪಿದ್ದಾರೆ. ಪ್ರತಿಭಟನೆ ನಡೆಸುವ ರೈತರ ನೈತಿಕತೆ ಪ್ರಶ್ನಿಸುವ ಮೂಲಕ ಅವಮಾನಿಸಿದ್ದಾರೆ. ಆದ್ದರಿಂದ ರೈತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಆ.14ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ನಿರ್ಲಕ್ಷಿಸಿದರೆ ಆ.15ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಹಸಿಲ್ ಕಚೇರಿಯಲ್ಲಿ ಉಪ ತಹಸೀಲ್ದಾರ್ ರೇಣುಕಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಕಾರ್ಯಾಧ್ಯಕ್ಷ ಕಕ್ಕುಪ್ಪಿ ಎಂ. ಬಸವರಾಜ, ಕಾರ್ಯದರ್ಶಿ ಎಂ.ಎಲ್.ಕೆ. ನಾಯ್ಡು, ಉಪಾಧ್ಯಕ್ಷ ದೇವರಮನಿ ಮಹೇಶ್, ಮುಖಂಡರಾದ ಗಂಟಿ ಸೋಮಶೇಖರ್, ಮಾಬು ಸಾಬ್, ಉಜ್ಜನಯ್ಯ, ಎಸ್.ಬಾಷಾ, ವಿ.ನಾಗರಾಜ, ಸೋಮಪ್ಪ, ಮಹಾದೇವಪ್ಪ ಇತರರಿದ್ದರು.