ಸುಧಾರಣೆಯಾಗಿಲ್ಲ ಗಣಿಬಾಧಿತ ಹಳ್ಳಿಗಳು, ಕೇಳೋರಿಲ್ಲ ಗೋಳು

ಕೇವಲ ಕ್ರಿಯಾಯೋಜನೆ ತಯಾರಿಕೆ >>

ಹುಡೇಂ ಕೃಷ್ಣಮೂರ್ತಿ

ಹೊಸಪೇಟೆ: ದೂರದ ಬೆಟ್ಟ ಕಣ್ಣಿಗೆ ಕಾಣುವುದು ನುಣ್ಣಗೆ ಎನ್ನುವ ಗಾದೆ ಮಾತು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ. ಕೇವಲ ಕ್ರಿಯಾಯೋಜನೆ ತಯಾರಿಕೆಯಲ್ಲೇ ಕಾಲ ದೂಡುತ್ತಿರುವುದು ಈ ಮಾತಿಗೆ ಪುಷ್ಠಿ ನೀಡುತ್ತಿದೆ.

ಅವ್ಯಾಹತವಾಗಿ ನಡೆದ ಗಣಿಗಾರಿಕೆಯಿಂದ ನಲುಗಿದ ಹೊಸಪೇಟೆ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನ ಸುತ್ತಲಿನ ಹಳ್ಳಿಗಳ 10 ವರ್ಷಗಳ ಅಭಿವೃದ್ಧಿಗೆ ನಾಲ್ಕನೇ ಬಾರಿ ಪರಿಷ್ಕೃತ ಕ್ರಿಯಾಯೋಜನೆ ರೂಪಿಸಲು ಜು.16ರಂದು ಬಳ್ಳಾರಿ, 17ರಂದು ಸಂಡೂರು ಹಾಗೂ 18ರಂದು ಹೊಸಪೇಟೆಯಲ್ಲಿ ಸಭೆ ಆಯೋಜಿಸಲಾಗಿದೆ. ಈಗಲಾದರೂ ಯೋಜನೆ ಅನುಷ್ಠಾನಕ್ಕೆ ಕಾಲ ಕೂಡುವುದೇ ಎಂಬ ಜಿಜ್ಞಾಸೆ ಮೂಡಿದೆ.

ಗಣಿ ಬಾಧಿತ ಹಳ್ಳಿಗಳ ಜನರು ಧೂಳು, ವಾಹನಗಳ ಅಬ್ಬರದ ಶಬ್ಧ ಮಾಲಿನ್ಯ, ರಸ್ತೆಗಳ ಅಧೋಗತಿ, ಕಲುಷಿತ ನೀರು ಸೇವನೆ ಸೇರಿ ಇತರ ಸಮಸ್ಯೆಯ ಸುಳಿಗೆ ಸಿಲುಕಿ ನೆಮ್ಮದಿಯ ದಿನಗಳಿಗಾಗಿ ಎದುರು ನೋಡುತ್ತಿದ್ದಾರೆ. ಸಂಡೂರು ತಾಲೂಕಿನ ಚೋರನೂರು ಹೊರತುಪಡಿಸಿ ಶೇ.70, ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ಜಂಬುನಾಥನಹಳ್ಳಿ ಸೇರಿ ಶೇ.20 ಮತ್ತು ಬಳ್ಳಾರಿ ತಾಲೂಕಿನ ಮಿಂಚೇರಿ, ಹರಗಿನಡೋಣಿ ಸೇರಿ ಇತರ ಭಾಗದ ಶೇ.10 ಹಳ್ಳಿಗಳ ಜನರ ಬದುಕು ನರಕವಾಗಿದೆ.

ಸಮಾಜ ಪರಿವರ್ತನಾ ಸಮುದಾಯದಿಂದ ಸುಪ್ರೀಂಕೋರ್ಟ್‌ಗೆ 2013ರ ಏಪ್ರಿಲ್ 18ರಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಗಣಿಬಾಧಿತ ಪ್ರದೇಶದ ಜನರ ಪುನರ್ವಸತಿ, ಪರಿಸರ ಹಾನಿ ತಡೆಯುವುದು ಸೇರಿ ಜನರ ಜೀವನ ಸುಧಾರಣೆಗೆ ವಿಶೇಷ ಘಟಕ ಸ್ಥಾಪಿಸುವಂತೆ ಸಿಇಸಿ ಮಾಡಿದ ಶಿಫಾರಸು ವರದಿ ಸಲ್ಲಿಸಿದೆ. ಅದನ್ನೆಲ್ಲ ಪರಿಗಣಿಸಿದ ಸುಪ್ರೀಂಕೋರ್ಟ್, 2018ರ ಏಪ್ರಿಲ್ 13ರಂದು ವಿಶೇಷ ಘಟಕ ಸ್ಥಾಪಿಸುವಂತೆ ಅಂತಿಮ ಆದೇಶದಲ್ಲಿ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ, 2012ರಲ್ಲೂ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇದೇರೀತಿ ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ 2014ರ ಫೆಬ್ರವರಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು, 2014 ಜೂನ್ 26ರಂದು ಗಣಿಬಾಧಿತ ಜನರ ಪುನರುಜ್ಜೀವನಕ್ಕಾಗಿ ‘ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಷನ್ ಕಾರ್ಪೋರೇಷನ್’(ಕೆಎಂಇಆರ್‌ಸಿ) ಸ್ಥಾಪಿಸಲಾಗಿದೆ. ಕಾರ್ಯಕ್ರಮಗಳ ರೂಪುರೇಷೆ ದೃಷ್ಟಿಯಿಂದ ‘ಗಣಿಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್)ರೂಪಿಸಲಾಗಿದೆ. ಆದರೆ, ಕೇವಲ ಕ್ರಿಯಾಯೋಜನೆ ತಯಾರಿಕೆಯಾಗುತ್ತಿದ್ದು, ಸುಧಾರಣಾ ಕ್ರಮ ಅನುಷ್ಠಾನ ಈವರೆಗೆ ಆಗಿಲ್ಲ ಎನ್ನುವುದು ಅಲ್ಲಿನ ಜನರ ದೌರ್ಭಾಗ್ಯ.

₹13 ಸಾವಿರ ಕೋಟಿ ಜಮೆ : ಗಣಿಗಾರಿಕೆಯಿಂದ ನರಳಿದ ಪ್ರದೇಶಗಳನ್ನು ಕೆಎಂಇಆರ್‌ಸಿಯಿಂದ 30 ವರ್ಷಗಳವರೆಗೆ ಅಭಿವೃದ್ಧಿ ಪಡಿಸಬೇಕೆಂದು 2,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಗಣಿಗಾರಿಕೆ ವಹಿವಾಟಿನಿಂದ ಶೇ.10, ಸಿ ಕೆಟಗರಿ ಗಣಿಗಳ ಹರಾಜಿನಿಂದ ಶೇ.10 ಸೇರಿ ಇತರ ಮೂಲ ಗಳಿಂದ ಕಾರ್ಪೋರೇಷನ್‌ಗೆ ಶೇಖರಣೆಯಾಗುತ್ತಿದೆ. ಈವರೆಗೆ ಅಂದಾಜು 13 ಸಾವಿರ ಕೋಟಿ ರೂ. ಜಮೆಯಾಗಿದ್ದರೂ, ಅದರ ಪ್ರಯೋಜನೆ ಗಣಿಬಾಧಿತ ಪ್ರದೇಶದ ಜನರಿಗೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ.

ಅನುದಾನ ಅತಿಕ್ರಮಣ ಆಗದಿರಲಿ : ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕೆಎಂಇ ಆರ್‌ಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಹಾಗೂ ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಬಳಸಬಹು ದಾಗಿದೆ. ಇಷ್ಟೆಲ್ಲ ಅನುದಾನ ಲಭ್ಯವಾದರೂ ಗಣಿ ಪ್ರದೇಶಗಳ ಹಳ್ಳಿಗಳ ಜನರ ಪರಿಸ್ಥಿತಿ ಶೋಚನೀಯವಾಗಿದೆ. ಒಂದೇ ಕೆಲಸಕ್ಕೆ ವಿವಿಧ ಯೋಜನೆ ಅನುದಾನ ಬಳಕೆಯ ಅತಿಕ್ರಮಣವಾಗದಂತೆ ತಡೆದು ಅಭಿವೃದ್ಧಿಗೆ ಮುಂದಾಗಬೇಕಿದೆ.

ಸುಪ್ರೀಂ ಸೂಚನೆಯಂತೆ ಈಗ ರೈಲ್ವೆ ಮಾರ್ಗ, ಯಾರ್ಡ್‌ಗಳ ಸ್ಥಾಪನೆ ಸೇರಿ ಇತರೆ ಕಾರ್ಯ ಮಾಡಿ ವರದಿ ಸಲ್ಲಿಸಲಾಗಿದೆ. ಕೋರ್ಟ್ ಆದೇಶದನ್ವಯ ಕ್ರಿಯಾಯೋಜನೆ ರೂಪಿಸಲು ಈಗ ಮುಖಂಡರ ಅಭಿಪ್ರಾಯ ಪಡೆಯಲು ಸಭೆ ನಡೆಯಲಿದೆ. ಕೆಎಂಇಆರ್‌ಸಿಯಲ್ಲಿ ಎಷ್ಟು ಹಣ ಜಮೆಯಾಗಿದೆ ಎಂಬುದು ತಿಳಿದಿಲ್ಲ. ಜಿಲ್ಲೆಗೆ 4500 ಕೋಟಿ ರೂ.ಬರಬಹುದು.
– ರಾಮ್ ಪ್ರಸಾತ್ ಮನೋಹರ್ ಜಿಲ್ಲಾಧಿಕಾರಿ, ಬಳ್ಳಾರಿ

ಗಣಿ ಬಾಧಿತ ಪ್ರದೇಶಾಭಿವೃದ್ಧಿಗೆ ಡಿಸಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆಯಾಗಬೇಕು. ಈವರೆಗೆ ಅಧಿಕಾರಿಗಳೇ ಕ್ರಿಯಾ ಯೋಜನೆ ರೂಪಿಸು ತ್ತಿದ್ದರಿಂದ ಸರಿಯಾದ ರೀತಿ ಸಫಲಾಗಿಲ್ಲ. ಈಗ ಜನರರೊಂದಿಗೆ ಸೇರಿ ಸಭೆ ನಡೆಸುವುದು ಸ್ವಾಗತಾರ್ಹ.
ಶಿವಕುಮಾರ ಮಾಳಿಗಿ ಜನಸಂಗ್ರಾಮ ಪರಿಷತ್ ಮುಖಂಡ