ಆಟೋ ಸೇವೆ ಸ್ಥಗಿತ, ಜನರ ಪರದಾಟ

ಹೊಸಪೇಟೆಯಲ್ಲಿ ಸಾರಿಗೆ ಕಾರ್ಮಿಕರ ಒಕ್ಕೂಟದಿಂದ ಮುಷ್ಕರ>>

ಹೊಸಪೇಟೆ: ಕೇಂದ್ರ ಸರ್ಕಾರದ ನೂತನ ಮೋಟಾರ್ ವಾಹನ (ತಿದ್ದುಪಡಿ) ಮಸೂದೆ-2017 ವಿರೋಧಿಸಿ ನಗರದಲ್ಲಿ ಸಾರಿಗೆ ಕಾರ್ಮಿಕರ ಸಂಘಗಳ ಒಕ್ಕೂಟ, ಸಾರಿಗೆ ರಂಗದ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಸಮನ್ವಯ ವೇದಿಕೆ ಸೇರಿ ವಿವಿಧ ಸಂಘಟನೆಗಳು ಮುಷ್ಕರ ನಡೆಸಲಾಯಿತು.

ಆಟೋ, ಟಾಟಾ ಏಸ್, ಮ್ಯಾಕ್ಸಿ ಕ್ಯಾಬ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಜನರು ಪರದಾಡಿದರು. ಸಾರಿಗೆ ಬಸ್ ಸಂಚಾರ ಎಂದಿನಂತೆ ಇತ್ತು. ಆದರೆ ಬಳ್ಳಾರಿ, ರಾಯಚೂರು, ಬೆಂಗಳೂರು ಸೇರಿ ವಿವಿಧೆಡೆಯಿಂದ ಬಸ್‌ಗಳಲ್ಲಿ ಬಂದಿಳಿದ ಪ್ರಯಾಣಿಕರು ಲಗೇಜು ಹಿಡಿದುಕೊಂಡು ಮಕ್ಕಳೊಂದಿಗೆ ಮನೆಗಳಿಗೆ ತೆರಳಲು ಪ್ರಯಾಸಪಡಬೇಕಾಯಿತು.

ನಗರದ ಶಾನುಭಾಗ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಆಟೋ ಚಾಲಕರು ಸೇರಿ ವಿವಿಧ ಸಂಘಟನೆ ಮುಖಂಡರು ಆರ್‌ಟಿಒ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಸಂತೋಷ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಅಚ್ಛೇದಿನ್ ಬರುತ್ತದೆಂದು ಹೇಳಿದ್ದರು. ಆದರೆ, ಸಾರಿಗೆ ಕಾರ್ಮಿಕರ ಜೀವನಕ್ಕೆ ಮರಣ ಶಾಸನದಂತಿರುವ ಮೋಟಾರ್ ವಾಹನ (ತಿದ್ದುಪಡಿ) ಮಸೂದೆಯನ್ನು ಜಾರಿಗೆ ತಂದು ಕರಾಳ ದಿನವಾಗಿಸಿದ್ದಾರೆ. ಈ ಕಾಯ್ದೆಯನ್ನು 8 ಬಾರಿ ವಾಪಸ್ ಪಡೆದಿದ್ದು, ಈಗ ‘ರಸ್ತೆ ಸಾರಿಗೆ ಮತ್ತು ಸುರಕ್ಷತೆ ಕಾಯ್ದೆ’ ಹೆಸರಲ್ಲಿ 100-200 ರೂ. ಸಂಪಾದಿಸುವ ಚಾಲಕರಿಂದ ಸಣ್ಣ ತಪ್ಪಿಗೂ 10 ಸಾವಿರ ರೂ.ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೊಳಿಸಿರುವುದು ಖಂಡನೀಯ. ಸಾರಿಗೆ ಕಾರ್ಮಿಕರಿಗೆ ಅನ್ಯಾಯವಾದರೂ ರಾಜ್ಯದ ಸಂಸದರು ಧ್ವನಿ ಎತ್ತುತ್ತಿಲ್ಲ. ಅವರ ಮಕ್ಕಳ್ಯಾರೂ ಆಟೋ ಚಾಲಕರಾಗಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಟೋ ಚಾಲಕರ ಸಂಘದ ಕಾರ್ಯದರ್ಶಿ ರಾಮಚಂದ್ರ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಹುಲಿಗಿ ಭಕ್ತರಿಗೆ ಸಮಸ್ಯೆ: ಹೊಸಪೇಟೆಯಲ್ಲಿ ಆಟೋ ಸೇರಿ ವಿವಿಧ ಲಘು ವಾಹನಗಳ ಚಾಲಕರ ಮುಷ್ಕರದಿಂದ ಮಂಗಳವಾರ ಹುಲಿಗಿ ದೇವಸ್ಥಾನ ಹಾಗೂ ಟಿಬಿ ಡ್ಯಾಂಗೆ ತೆರಳುವ ಭಕ್ತರು, ಪ್ರವಾಸಿಗರು ತೊಂದರೆ ಅನುಭವಿಸಿದರು. ಯಪ್ಪಾ ನಮಗ ಇದೆಲ್ಲ ಗೊತ್ತಿದ್ದಿಲ್ಲ. ಈಗ ಅಮ್ಮನ ದೇವಸ್ಥಾನಕ್ಕೆ ಹೋಗಾಕ ಮಾನ್ವಿ ತಾಲೂಕಿನ ಗುಡಿಹಾಳದಿಂದ ಬಂದೀವಿ. ಒಂದ್ ಆಟೋನೂ ಇಲ್ಲ. ಏನ್ಮಾಡೋದು ಎಂದು ಮಹಿಳೆಯರು ತಮಗಾದ ತೊಂದರೆಯನ್ನು ಹೇಳಿದರು.