ಶ್ರೀಹರಿ, ಬಿ.ಸಾಲಿನ್ ಚೆಸ್ ಚಾಂಪಿಯನ್

ಹೊಸಪೇಟೆ: ಚೆಸ್ ಸ್ಪರ್ಧೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಸಹಕಾರಿ ಎಂದು ಬಿಇಒ ಎಲ್.ಡಿ.ಜೋಷಿ ಹೇಳಿದರು.

ನಗರದ ಪಿಬಿಎಸ್ ಸರ್ಕಾರಿ ಶಾಲೆಯಲ್ಲಿ ಎಲೈಟ್ ಚೆಸ್ ಅಕಾಡೆಮಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಂಡರ್ 12 ಹಾಗೂ 16 ವಯೋಮಿತಿಯ ಚೆಸ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ನಂತರ ನಡೆದ ಪಂದ್ಯದಲ್ಲಿ 12ರ ವಯೋಮಿತಿ ವಿಭಾಗದಲ್ಲಿ ಬಾಗಲಕೋಟೆಯ ಶ್ರೀಹರಿ ದೇಶಪಾಂಡೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಂತಿಮ ಪಂದ್ಯದಲ್ಲಿ ಎಲ್ಲ ಒಂಭತ್ತು ಸುತ್ತಿನಲ್ಲೂ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

16ರ ವಯೋಮಿತಿಯ ವಿಭಾಗದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಮಂಗಳೂರಿನ ಬಿ.ಸಾಲಿನ್ ಲಕ್ಷ್ಮೀಶ್ 7 ಅಂಕ ಪಡೆದು ಚಾಂಪಿಯನ್ ಆದರು. ಎರಡೂ ವಿಭಾಗದಲ್ಲಿ ಆನಂತರದ ಸ್ಥಾನ ಪಡೆದ ತಲಾ ಹತ್ತು ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಬಳ್ಳಾರಿ, ಆಂಧ್ರ, ತಮಿಳುನಾಡು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಬಾಗಲಕೋಟೆ, ಗದಗ, ಮಂಗಳೂರು, ಅಂಡರ್ 12ನಲ್ಲಿ 144, ಅಂಡರ್ 16ನಲ್ಲಿ 85 ಮಕ್ಕಳು ಭಾಗವಹಿಸಿದ್ದರು. ಎಂಎಸ್‌ಪಿಎಲ್‌ನ ಗಜಾನನ, ಸರ್ಕಾರಿ ಪ್ರಾಥಮಿಕ ಶಾಲೆ ನೌಕರರ ಅಧ್ಯಕ್ಷ ಚಂದ್ರಶೇಖರ್, ಶಾಲೆಯ ಮುಖ್ಯಶಿಕ್ಷಕ ಧನ್‌ರಾಜ್, ಬಿಆರ್‌ಪಿ ಕರಿಬಸಪ್ಪ, ಶಿಲ್ಪಾ ಸಂದೀಪ್ ಸಿಂಗ್, ಸುಜಾತ ಪಾಟೀಲ್, ಸೌಮ್ಯ ಇತರರಿದ್ದರು.