ಬಾಕಿ ನೀಡದಕ್ಕೆ ಗ್ರಾಪಂ ಕಚೇರಿಗೆ ಬೀಗ

<<ಬೋರ್‌ವೆಲ್ ಬಾಡಿಗೆ ಪಾವತಿಸದ ಆರೋಪ>>

ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಬಳಿ ಗ್ರಾಪಂ ವ್ಯಾಪ್ತಿಯ ಗ್ರಾಮಕ್ಕೆ ಕುಡಿವ ನೀರು ಪೂರೈಕೆ ಮಾಡಿದಬೋರ್‌ವೆಲ್ ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಿ ಬೋರ್‌ವೆಲ್ ಮಾಲೀಕ ಚನ್ನಬಸಪ್ಪ ಗ್ರಾಪಂ ಕಚೇರಿಗೆ ಸೋಮವಾರ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಅಂಬಳಿ ಗ್ರಾಪಂ ವ್ಯಾಪ್ತಿಯ ಸಂಗಮೇಶ್ವರ ಗ್ರಾಮದ ಹಾಗೂ ಮಾಜಿ ಉಪಾಧ್ಯಕ್ಷ ಸಿ.ಚನ್ನಬಸಪ್ಪ ಅವರ ಬೋರ್‌ವೆಲ್ ಬಾಡಿಗೆ ಪಡೆದು ಕುಡಿವ ನೀರು ಪೂರೈಕೆ ಮಾಡಲಾಗಿತ್ತು. 2016-17ನೇ ಸಾಲಿನಲ್ಲಿ ಮೂರು ತಿಂಗಳಿನ ಬಾಡಿಗೆ ಹಣ ಪಾವತಿಸಿಲ್ಲ. ಹೀಗಾಗಿ ಆಕ್ರೋಶಗೊಂಡ ಚನ್ನಬಸ್ಪ, ಕಚೇರಿಗೆ ಬೀಗ ಹಾಕಿದರು. ಈ ಬಗ್ಗೆ ಮಾಹಿತಿ ತಿಳಿದ ಗ್ರಾಪಂ ಸದಸ್ಯರು ಹಾಗೂ ಪಿಡಿಒ ಅವರು ಮಾಲೀಕ ಸಿ.ಚನ್ನಬಸಪ್ಪ ಮನವೊಲಿಸಿ ಶೀಘ್ರ ಬಾಕಿ ಹಣ ಪಾವತಿಸುವ ಭರವಸೆ ನೀಡಿದ ಬಳಿಕ ಕಚೇರಿ ಬೀಗ ತೆಗೆಸಲಾಯಿತು.

ಈ ಕುರಿತು ಪಿಡಿಒ ರಾಘವೇಂದ್ರ ಪ್ರತಿಕ್ರಿಯಿಸಿ, ಹಿಂದಿನ ಪಿಡಿಒ ಬಿಲ್ ಪಾವತಿ ಮಾಡಲು ವಿಳಂಬವಾಗಿದೆ. ಬಳಿಕ ಗ್ರಾಪಂಯಿಂದ ಚೆಕ್ ವಿತರಣೆ ಮಾಡಿದೆ. ಆದರೆ, ಮಾಲೀಕರು ಚೆಕ್ ಡ್ರಾ ಮಾಡಿಕೊಳ್ಳುವಲ್ಲಿ ವಿಳಂಬ ಮಾಡಿದ್ದರಿಂದ ಸಮಸ್ಯೆಯಾಗಿದೆ. ಮಾಲೀಕರಿಗೆ ಶೀಘ್ರ ಹಣ ಪಾವತಿಸಲಾಗುವುದು ಎಂದರು.

Leave a Reply

Your email address will not be published. Required fields are marked *