ವಾಣಿಜ್ಯ ಬ್ಯಾಂಕ್ ಎದುರು ರೈತರ ಸಾಲು

ಬಳ್ಳಾರಿ: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರ ವಿವರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಶುಕ್ರವಾರ ರೈತರು ಸಾಲುಗಟ್ಟಿ ನಿಂತಿದ್ದು ಕಂಡು ಬಂತು.

ರೈತರ ಸಾಲ ಮನ್ನಾ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ತಂತ್ರಾಂಶ ರೂಪಿಸಿದ್ದು, ಜಿಲ್ಲಾಡಳಿತದ ವಿಶೇಷ ಮುತುವರ್ಜಿಯೊಂದಿಗೆ ರೈತರ ಹೆಸರು ಮತ್ತಿತರ ಅಗತ್ಯ ಮಾಹಿತಿ ನೋಂದಾಯಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಜಿಲ್ಲೆಯ 253 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜಮೀನಿನ ಸರ್ವೇ ಸಂಖ್ಯೆ, ಆಧಾರ್ ಕಾರ್ಡ್, ಪಡಿತರ ಚೀಟಿ ನೋಂದಣಿ ನಡೆದಿದ್ದು ರೈತರು ಸಾಲಿನಲ್ಲಿ ನಿಂತು ಮಾಹಿತಿ ನೀಡಿದರು. ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರರು ಮತ್ತು ಕಂದಾಯ ಅಧಿಕಾರಿಗಳು ತಾಲೂಕು, ಹೋಬಳಿ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಡಿಸಿ ವಿ.ರಾಮಪ್ರಸಾತ್ ಮನೋಹರ್ ನಗರದ ಎಸ್‌ಬಿಐ ಮುಖ್ಯ ಕಚೇರಿ ಶಾಖೆ ಸೇರಿ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜ. 15ರವರೆಗೆ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ರೈತರು ಅವಸರ ಮಾಡದೆ ಮಾಹಿತಿ ಸಲ್ಲಿಸಬೇಕು. ಪ್ರತಿ ಬ್ಯಾಂಕ್‌ನಲ್ಲಿ ತೆರೆಯಲಾಗಿರುವ ವಿಶೇಷ ಕೌಂಟರ್‌ನಲ್ಲಿ ನಿತ್ಯ 40 ರೈತರ ಹೆಸರು ನೋಂದಣಿ ನಡೆಯಲಿದೆ. ಹೆಚ್ಚಿನ ರೈತರು ಬಂದರೆ ಟೋಕನ್ ಸಂಖ್ಯೆ ನೀಡಲಾಗುತ್ತದೆ ಎಂದು ಡಿಸಿ ತಿಳಿಸಿದರು.

ಬೆಳೆ ಸಾಲ ಮನ್ನಾ ಯೋಜನೆಯಡಿ 2017ರ ಡಿ 31ರವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರೈತರು ಹೆಸರು ಹಾಗೂ ಇತರ ವಿವರ ನೋಂದಾಯಿಸಬಹುದಾಗಿದೆ. ಜಿಲ್ಲೆಯ 80 ಸಾವಿರ ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಬ್ಯಾಂಕ್ ಶಾಖೆಗಳಲ್ಲಿ ತಲಾ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರೈತರು ಗೊಂದಲ ಹಾಗೂ ಸಂದೇಹಗಳಿದ್ದಲ್ಲಿ ಡಿಸಿ ಕಚೇರಿಯ ಸಹಾಯವಾಣಿ ಸಂಖ್ಯೆ 08392-277019 ಸಂಪರ್ಕಿಸಬಹುದಾಗಿದೆ.