ಬಿಇಒ ಕಚೇರಿ ಮುಂದೆ ಪಾಠ ಮಾಡಿದ ಶಿಕ್ಷಕಿ !

 ಶಾಲಾ ಮಾನ್ಯತೆ ನವೀಕರಣಕ್ಕೆ ಲಂಚದ ಬೇಡಿಕೆ ಆರೋಪ >>

ಬಳ್ಳಾರಿ: ನಗರದ ಡಿಡಿಪಿಐ ಕಚೇರಿಗೆ ಹೊಂದಿಕೊಂಡಿರುವ ಬಿಇಒ ಕಚೇರಿ ಮುಂದಿನ ಮರದ ನೆರಳಲ್ಲಿ ಒಂಭತ್ತು ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಶಿಕ್ಷಕಿಯೊಬ್ಬರು ಪಾಠ ಮಾಡುವ ಮೂಲಕ ಶುಕ್ರವಾರ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಪಕ್ಕದಲ್ಲೇ ನಿಲ್ಲಿಸಿದ್ದ ಶಾಲಾ ವಾಹನಕ್ಕೆ ‘ಮಾನ್ಯ ಶಿಕ್ಷಣಾಧಿಕಾರಿಗಳೇ, ಲಂಚ ಕೊಡಲು ನಮ್ಮಲ್ಲಿ ದುಡ್ಡು ಇಲ್ಲ’ ಎಂದು ಬರೆದಿದ್ದ ಬ್ಯಾನರ್ ಅಂಟಿಸಿದ್ದು, ಇದರ ಒಳ ಮರ್ಮ ತಿಳಿಸುತ್ತಿತ್ತು.

ನಗರದ ಗುಗ್ಗರಹಟ್ಟಿ ಪ್ರದೇಶದ ಶ್ರೀ ಗುರುಕುಲ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷೆಯೂ ಆಗಿರುವ ಮುಖ್ಯ ಶಿಕ್ಷಕಿ ಪದ್ಮಾವತಿ ಪಾಠ ಮಾಡುತ್ತಿದ್ದವರು. ತಮ್ಮ ಈ ವಿಶಿಷ್ಟ ಪ್ರತಿಭಟನೆಗೆ ಅವರು ಕೊಡುವ ವಿವರಣೆ ಹೀಗಿದೆ; ‘ನಮ್ಮ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗೆ 300 ವಿದ್ಯಾರ್ಥಿಗಳಿದ್ದಾರೆ. ಶಾಲಾ ಮಾನ್ಯತೆ ನವೀಕರಣಕ್ಕಾಗಿ ಕೆಲ ವರ್ಷಗಳಿಂದ ಶಿಕ್ಷಣ ಇಲಾಖೆ ಕಚೇರಿಗೆ ಅಲೆಯುತ್ತಿದ್ದೇನೆ. ಸ್ಪಂದನೆ ಸಿಗುತ್ತಿಲ್ಲ. ನಾನು ಹೀಗೆ ಶಿಕ್ಷಣ ಇಲಾಖೆ ಕಚೇರಿಗೆ ಅಲೆದರೆ ವಿದ್ಯಾರ್ಥಿಗಳ ಪಾಠಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳನ್ನೇ ಇಲ್ಲಿ ಕರೆತಂದು ಪಾಠ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳನ್ನು ನೋಡಿಯಾದರೂ ಅಧಿಕಾರಿಗಳಿಗೆ ಅನುಕಂಪ ಬರಲಿ’ ಎಂದರು.

ನಮ್ಮ ಅಜ್ಜಿ, ತಾಯಿ, ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದೇವೆ. ಮಕ್ಕಳಿಗೆ ಉತ್ತಮ, ಉಚಿತ ಶಿಕ್ಷಣ ನೀಡಲು ಶಾಲೆ ಆರಂಭಿಸಿದ್ದೇವೆ. ವೀವಿ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ 26 ವರ್ಷ, ಹೊಸಪೇಟೆ ವಿಜಯನಗರ ಕಾಲೇಜಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಎಂಟು ವರ್ಷ ಕಾರ್ಯನಿರ್ವಹಿಸಿದ್ದೇನೆ. ನನ್ನ ಸಂಪಾದನೆಯಿಂದ ಶಾಲೆ ನಡೆಸುತ್ತಿದ್ದೇನೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಪದ್ಮಾವತಿ.

ನಾನು ನಗರಕ್ಕೆ ಬಿಇಒ ಆಗಿ ಬರುವ ಮುನ್ನವೇ ಗುರುಕುಲ ಶಾಲೆಯ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ನಮ್ಮ ಕಚೇರಿಯ ಅಧಿಕಾರಿಗಳು ಗುರುಕುಲ ಶಾಲೆ ನವೀಕರಣದ ಕಡತ ಕಳೆದಿದ್ದಾರೆ. ಇದರಿಂದಾಗಿ ಗುರುಕುಲ ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ ಮತ್ತೆ 2018ರ ಜು. 28ರಂದು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ನವೀಕರಣಕ್ಕೆ ಸಂಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ.
– ವೆಂಕಟೇಶ್ ರಾಮಚಂದ್ರ ಬಳ್ಳಾರಿ ಬಿಇಒ