ಪ್ರಶಸ್ತಿಯಿಂದ ಕಲೆಗೆ ಸಿಕ್ಕಿದೆ ಪ್ರೋತ್ಸಾಹ

 ದೆಹಲಿಯಲ್ಲಿ ಸಮ್ಮಾನ್ ಪ್ರಶಸ್ತಿ ಸ್ವೀಕಾರ>

ಬಳ್ಳಾರಿ:ರಂಗಭೂಮಿಯಲ್ಲಿ 78 ವರ್ಷದ ಸೇವೆ ಗುರುತಿಸಿ ಕೇಂದ್ರ ಸರ್ಕಾರ ವಯೋಶ್ರೇಷ್ಠ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿರುವುದು ಕಲೆಗೆ ಮತ್ತಷ್ಟು ಪ್ರೋತ್ಸಾಹ ಜತೆಗೆ ಮುಂದಿನ ಯೋಜನೆಗಳಿಗೆ ಶಕ್ತಿ ತುಂಬಿದಂತಾಗಿದೆ ಎಂದು ನಾಡೋಜ ಬೆಳಗಲ್ಲು ವೀರಣ್ಣ ಹೇಳಿದರು.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ನಿಮಿತ್ತ ಜೀವಮಾನದ ಸಾಧನೆಗಾಗಿ ಅ.1ರಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಂಟು ಜನ ಗಣ್ಯರನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ ನೀಡಿದೆ. ದೆಹಲಿಯ ಭಾರತ ಸರ್ಕಾರದ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಪೂಜಿಗೆ 150 ಕಾರ್ಯಕ್ರಮ: ಗಾಂಧಿ ಜಯಂತಿ ನಿಮಿತ್ತ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅ.7ರಂದು ಸಂಜೆ 6ಕ್ಕೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್‌ನಿಂದ ಬಾಪೂಜಿಗೆ 150 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಗಾಯಕಿ ಸಿಯೆನ್ನಾ ಮತ್ತು ಸಂಗಡಿಗರಿಂದ ಮಹಾತ್ಮಾಗಾಂಧೀಜಿ ಕುರಿತಾದ ಗೀತೆಗಳು ಹಾಗೂ ರಾಷ್ಟ್ರಗೀತೆಗಳ ಗಾಯನ ನಡೆಯಲಿದೆ. ಬಳಿಕ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶಿಸಲಾಗುವುದು ಎಂದು ಬೆಳಗಲ್ಲು ವೀರಣ್ಣ ತಿಳಿಸಿದರು.