ಕರಾಟೆ ಪಂದ್ಯದಲ್ಲಿ ಮಿಂಚಿದ ಕರ್ನಾಟಕ

>

ಬಳ್ಳಾರಿ: ನಗರದ ವಾಲ್ಮೀಕಿ ಭವನದಲ್ಲಿ ಎರಡು ದಿನ ನಡೆದ ಅಖಿಲ ಭಾರತ ಮಟ್ಟದ ಬುಡೊಕಾನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಟುಗಳು ಮೊದಲ ಸ್ಥಾನ ಪಡೆಯುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ.

ಕರ್ನಾಟಕದ ಸ್ಪರ್ಧಾಳುಗಳು ವಿವಿಧ ವಿಭಾಗಗಳಲ್ಲಿ 127 ಬಂಗಾರ, 103 ಬೆಳ್ಳಿ, 126 ಕಂಚಿನ ಪದಕಗಳನ್ನು ಪಡೆದು 1108ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾರೆ. ತೆಲಂಗಾಣ ರಾಜ್ಯ ಪಟುಗಳು ದ್ವಿತೀಯ ಸ್ಥಾನ ಹಾಗೂ ಆಂಧ್ರಪ್ರದೇಶ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಬುಡೊಕಾನ್ ಡು ಇಂಡಿಯಾ, ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ತಕ್ಷಶಿಲಾ ಹೆಲ್ತ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು.

ಸಮಾರೋಪ: ಕರಾಟೆ ಕೇವಲ ಆತ್ಮ ರಕ್ಷಣೆಗಷ್ಟೆ ಸೀಮಿತವಾಗದೆ ಜೀವನ ಶೈಲಿ ರೂಪಿಸುವ ಹಾಗೂ ದೇಹ ಮತ್ತು ಮನಸು ಸದೃಢವಾಗಿಸಲು ಸಹಕಾರಿಯಾಗಿದೆ ಎಂದು ಬುಡೊಕಾನ್ ಕರಾಟೆ ಅಕಾಡೆಮಿ ಅಧ್ಯಕ್ಷ ಹನುಮಂತ ರಾವ್ ಹೇಳಿದರು. ಭಾನುವಾರ ನಡೆದ ಕರಾಟೆ ಪಂದ್ಯಾವಳಿಯ ಸಮಾರೋಪದ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಚೇರ‌್ಮನ್ ಆನಂದ್ ಪೋಲಾ, ಹರಿಶಂಕರ ಆಗ್ರವಾಲ, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಮುಖಂಡರಾದ ಎಸ್.ಎಂ.ಜಿತೇಂದ್ರಿಯ, ರಾಮಾಂಜನೇಯ, ಜಿಂದಾಲ್‌ನ ಮಾನ್‌ಸಿಂಗ್‌ಇತರರಿದ್ದರು.