ಬೆಂಗಳೂರು:
ರಾಷ್ಟ್ರೀಯ ಬಸವ ಪ್ರತಿಷ್ಠಾನವು ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಬಾಲಿ, ಮಲೇಷ್ಯಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳಲ್ಲಿ 11 ದಿನಗಳ ‘ಭಾರತ ವಚನ ಸಂಸ್ಕೃತಿ’ ಯಾತ್ರೆಯನ್ನು ಆಯೋಜಿಸಿದೆ.
ನ.21 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಇಂಡೋ-ಬಾಲಿ ಸಾಂಸ್ಕೃತಿಕ ಸಮಾವೇಶ ನಡೆಯಲಿದೆ. ಸಾಣೇ ಹಳ್ಳಿ ಮಠದ ಡಾ.ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ವಿ.ಗೋಪಾಲಗೌಡ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಮತ್ತು ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ವಚನ ಸಾಹಿತ್ಯದ ಜಾಗತಿಕ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾಣೆಹಳ್ಳಿ ಕಲಾಸಂಘ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ನೀಡಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಸುರೇಶ್ ವಹಿಸಲಿದ್ದಾರೆ.ಇದೇ ಸಂದರ್ಭ ಬಾಲಿಯ ಪ್ರೇಮ ಲೋಕ ಅಂತಾರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕರಾದ ಗುರೂಜಿ ಅವರಿಗೆ 24 ನೇ ಸಾಲಿನ ಚ್ೀ ಸಿವಲಿಯನ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ರಾಷ್ಟ್ರೀಯ ಬಸವ ಪ್ರತಿಷ್ಠಾನ, ಬಸವಾದಿ ಶರಣರ ಮೌಲ್ಯಗಳು ಮತ್ತು ವಚನಗಳ ನಿಜಾಚಾರಣೆಯ ಪ್ರಚಾರದ ಉದ್ದೇಶವನ್ನಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಸಾಣೇಹಳ್ಳಿ ಶ್ರೀಗಳ ಮಾರ್ಗದರ್ಶನದಲ್ಲಿ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಿ.ಎಸ್.ಬೋಪಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
