ಹೆಮ್ಮೆಯಿಂದ ಬೀಗಿದ ಬಾಲಯ್ಯ

ತೆಲುಗು ನಾಡಿನ ಮಹಾನ್ ಚೇತನ ನಂದಮೂರಿ ತಾರಕ ರಾಮರಾವ್ ಬದುಕನ್ನಾಧರಿಸಿ ಅವರ ಪುತ್ರ, ನಟ ನಂದಮೂರಿ ಬಾಲಕೃಷ್ಣ ‘ಎನ್​ಟಿಆರ್-ಕಥಾನಾಯಕುಡು’ ಮತ್ತು ‘ಎನ್​ಟಿಆರ್-ಮಹಾನಾಯಕುಡು’ ಸಿನಿಮಾಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದ ಅವರು ಸಿನಿಮಾ ಕುರಿತು ಮಾತನಾಡಿದರು. ಅಲ್ಲದೆ, ಕರ್ನಾಟಕದೊಂದಿಗಿನ ನಂಟು ಹಾಗೂ ಡಾ. ರಾಜ್​ಕುಮಾರ್ ಜತೆಗಿದ್ದ ಒಡನಾಟದ ಬಗ್ಗೆಯೂ ಹೇಳಿಕೊಂಡರು.

| ಅವಿನಾಶ್ ಜಿ.ರಾಮ್

ಬೆಂಗಳೂರು: ನಂದಮೂರಿ ಬಾಲಕೃಷ್ಣ ಸಾರ್ಥಕ ಭಾವದಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ತಂದೆ, ಹಿರಿಯ ನಟ, ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಕುರಿತ ಬಯೋಪಿಕ್ ಸಿದ್ಧವಾಗಿ, ಈಗಾಗಲೇ ಮೊದಲ ಪಾರ್ಟ್​ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು, ಅದರಲ್ಲೂ ಸ್ವತಃ ತಂದೆ ಪಾತ್ರವನ್ನು ಮಗನೇ ಪೋಷಿಸುವುದು ಸೋಜಿಗವೇ ಸರಿ. ಇದರಿಂದ ಪುಳಕಿತರಾಗಿರುವ ಅವರಿಗೆ ವೃತ್ತಿಜೀವನದಲ್ಲಿ ಇಂಥದ್ದೊಂದು ಸಿನಿಮಾ ಮಾಡಿದ್ದಕ್ಕಾಗಿ ತುಂಬ ಹೆಮ್ಮೆ ಇದೆ. 45 ವರ್ಷಗಳ ಹಿಂದೆ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಬಾಲಕೃಷ್ಣ, 35 ವರ್ಷಗಳ ಹಿಂದೆ ಹೀರೋ ಆಗಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅವರ ವೃತ್ತಿಜೀವನದಲ್ಲಿ ಅನೇಕ ರೀತಿಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ, ಆ ಎಲ್ಲ ಸಿನಿಮಾಗಳಿಗಿಂತ ‘ಎನ್​ಟಿಆರ್-ಕಥಾನಾಯಕುಡು’ ವಿಶೇಷವಾದದ್ದು. ‘ನನ್ನ ವೃತ್ತಿ ಬದುಕಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಅದರಲ್ಲಿ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಎಲ್ಲ ಪ್ರಕಾರಗಳು ಸೇರಿವೆ. ಅದೆಲ್ಲ ಹೊರತುಪಡಿಸಿ ಇನ್ನೂ ಏನಾದರೂ ವಿಶೇಷವಾಗಿರುವುದನ್ನು ಮಾಡಬೇಕು ಎಂಬ ಬಯಕೆ ಇತ್ತು.

ಎನ್​ಟಿಆರ್ ಬಯೋಪಿಕ್ ಮೂಲಕ ಅದು ಈಡೇರಿದೆ. ಇದು ನನಗೆ ವಿಶೇಷವಾದ ಸಿನಿಮಾ. ಯಾಕೆಂದರೆ, ಪ್ರಪಂಚದ ಸಿನಿಮಾ ಇತಿಹಾಸದಲ್ಲೇ ಒಬ್ಬ ವ್ಯಕ್ತಿಯ ಬಯೋಪಿಕ್​ನಲ್ಲಿ ಆತನ ಮಗನೇ ನಟಿಸಿರುವುದು ಇದೇ ಮೊದಲು. ಪ್ರಾಚೀನ ತೆಲುಗು ಪ್ರಾಂತ್ಯವನ್ನು ಸೃಷ್ಟಿಸಿದ್ದು ಗೌತಮಿಪುತ್ರ ಶಾತಕರ್ಣಿ. ಅವರ ಕುರಿತ ಸಿನಿಮಾ ಈಗಾಗಲೇ ಮಾಡಿದ್ದೇನೆ. ಆನಂತರ ಅಧುನಿಕ ತೆಲುಗು ರಾಜ್ಯವನ್ನು ಸೃಷ್ಟಿ ಮಾಡಿದ್ದು

ಎನ್​ಟಿಆರ್. ಈಗ ಅವರ ಬಯೋಪಿಕ್​ನಲ್ಲೂ ಬಣ್ಣ ಹಚ್ಚಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎನ್​ಟಿಆರ್ ಕುರಿತು ಸಿನಿಮಾ ಮಾಡಬೇಕು ಎಂಬ ಮಾತುಗಳು ದಶಕಗಳಿಂದಲೂ ಕೇಳಿಬರುತ್ತಿದ್ದವು. ಯಾರು ಮಾಡಲಿದ್ದಾರೆ ಎಂಬೆಲ್ಲ ಚರ್ಚೆಗಳೂ ನಡೆಯುತ್ತಿದ್ದವು. ಆದರೆ, ಯಾವುದೂ ಅಂತಿಮರೂಪ ಪಡೆದುಕೊಂಡಿರಲಿಲ್ಲ. ‘ನನ್ನ ತಂದೆಯ ಬಯೋಪಿಕ್​ನಲ್ಲಿ ಅವರದೇ ಪಾತ್ರವನ್ನು ನಾನು ಮಾಡಲಿದ್ದೇನೆ ಎಂದು ನಿರೀಕ್ಷೆಯನ್ನೂ ಮಾಡಿರಲಿಲ್ಲ. ಸಾಕಷ್ಟು ಬಾರಿ ಈ ಬಗ್ಗೆ ಚರ್ಚೆಗಳಾದವು. ಆದರೆ, ಇಂಥದ್ದೊಂದು ಸಿನಿಮಾ ಆಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಈ ಸಿನಿಮಾ ಕುರಿತು ಮಾತುಕತೆಯಾದಾಗ, ನೋಡೋಣ ಯೋಚಿಸುತ್ತೇನೆ ಅಂತಷ್ಟೇ ಹೇಳಿದ್ದೆ. ಆನಂತರ ನಿರ್ಧರಿಸಿದೆ. ಈ ಸಿನಿಮಾ ಮಾಡುವುದು ಬರೀ ಕೆಲಸವಲ್ಲ, ಅದು ನನ್ನ ಕರ್ತವ್ಯ ಅಂತ. ನನ್ನ ಬ್ಯಾನರ್​ನಲ್ಲೇ ಈ ಸಿನಿಮಾ ಆಗಬೇಕು ಎಂದು ನಿರ್ಧರಿಸಿದೆ. ಇದುವರೆಗೂ ನಾನು ಮಾಡಿರುವ ಪಾತ್ರಗಳಲ್ಲೇ ಅತ್ಯುತ್ತಮವಾದದ್ದು ಈ ಪಾತ್ರ’ ಎನ್ನುತ್ತಾರೆ ಬಾಲಯ್ಯ.

ಎನ್​ಟಿಆರ್ ಡಾ. ರಾಜ್ ಲೆಜೆಂಡ್ಸ್!

ಎಲ್ಲರಿಗೂ ತಿಳಿದಿರುವಂತೆ ಡಾ. ರಾಜ್​ಕುಮಾರ್ ಮತ್ತು ಎನ್.ಟಿ. ರಾಮರಾವ್ ಮಧ್ಯೆ ಆತ್ಮೀಯತೆ ಇತ್ತು. ಇಂದು ಅವರ ಮಕ್ಕಳಲ್ಲೂ ಅದು ಮುಂದುವರಿದಿದೆ. ರಾಜ್ ಪುತ್ರರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್ ಅವರನ್ನು ಕಂಡರೆ ಬಾಲಯ್ಯಗೆ ಅಚ್ಚುಮೆಚ್ಚು. ‘ರಾಜ್​ಕುಮಾರ್ ದೊಡ್ಡ ಕಲಾವಿದರು. ಅವರೆಲ್ಲ ಲೆಜೆಂಡ್​ಗಳು. ಅವರ ಜೀವನವನ್ನು ಸಿನಿಮಾರೂಪದಲ್ಲಿ ತೋರಿಸಬೇಕು. ಅದು ಅವರಿಗೆ ಗೌರವ ನೀಡಿದಂತೆ ಆಗುತ್ತಿದೆ. ಡಾ. ರಾಜ್ ಬಯೋಪಿಕ್ ಮಾಡುವಂತೆ ನಾನು ಪುನೀತ್ ರಾಜ್​ಕುಮಾರ್ ಅವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಆಸೆ ವ್ಯಕ್ತಪಡಿಸುತ್ತಾರೆ ಬಾಲಯ್ಯ.

ಮಿಸ್ ಯೂ ಅಂಬಿ!

ಡಾ. ರಾಜ್ ಪುತ್ರರು ಎಷ್ಟು ಅತ್ಮೀಯರೋ, ಅಷ್ಟೇ ಪ್ರೀತಿ-ವಿಶ್ವಾಸ ‘ರೆಬೆಲ್ ಸ್ಟಾರ್’ ಅಂಬರೀಷ್ ಅವರೊಂದಿಗೂ ಬಾಲಯ್ಯಗೆ ಇತ್ತು. ಅಂಬರೀಷ್ ಆಗಲಿಕೆ ಬಾಲಯ್ಯಗೆ ನೋವು ತಂದಿದೆ. ‘ಕಳೆದ ಕೆಲ ತಿಂಗಳ ಹಿಂದಷ್ಟೇ ನನ್ನ ಸಹೋದರ ನಂದಮೂರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು. ಆ ನೋವಿನಿಂದ ಹೊರಬರುವ ಮೊದಲೇ ನನ್ನ ಮಿತ್ರ ಅಂಬಿ ಕೂಡ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ನಾನು ಶಾಸಕನಾಗಿರುವ ಹಿಂದೂಪುರದಲ್ಲಿ ಲೇಪಾಕ್ಷಿ ಉತ್ಸವ ಆಯೋಜಿಸುತ್ತಿರುತ್ತೇನೆ. ಅದಕ್ಕೆ ರಾಜ್ ಪುತ್ರರು ಬರುತ್ತಾರೆ. ಅದೇ ರೀತಿ ಅಂಬಿಯೂ ಬರುತ್ತಿದ್ದರು’ ಎಂದು ಮೆಲುಕು ಹಾಕುತ್ತಾರೆ ಬಾಲಕೃಷ್ಣ.

Leave a Reply

Your email address will not be published. Required fields are marked *