ಬುಕ್ಕಾಂಬುದಿಯಲ್ಲಿ 24ರಂದು ಜನಜಾಗೃತಿ ಧರ್ಮ ಸಮ್ಮೇಳನ

ಬಾಳೆಹೊನ್ನೂರು: ಯುಗಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 83ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ತರೀಕೆರೆ ತಾಲೂಕು ಬುಕ್ಕಾಂಬುದಿ ಕ್ಷೇತ್ರದ ಬೆಟ್ಟದ ಮೇಲೆ ಜ.24ರಂದು ಜನಜಾಗೃತಿ ಬೃಹತ್ ಧರ್ಮಸಮ್ಮೇಳನ ಆಯೋಜಿಸಲಾಗಿದೆ ಎಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್ ಅಧ್ಯಕ್ಷ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಿಸಿದರು.

ಬುಕ್ಕಾಂಬುದಿ ಕ್ಷೇತ್ರದಲ್ಲಿ ಪ್ರತಿ ವರ್ಷ ಲಿಂ. ಶ್ರೀ ಉಜ್ಜಯಿನಿ ಜಗದ್ಗುರುಗಳ ಪುಣ್ಯಸ್ಮರಣೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪುಣ್ಯಾರಾಧನೆ ಅಂಗವಾಗಿ 5 ದಿನಗಳ ಕಾಲ ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಲೋಕಕಲ್ಯಾಣಾರ್ಥ ಇಷ್ಟಲಿಂಗಾರ್ಚನೆ ನೆರವೇರಿಸಿ 23ರಂದು ಸಂಜೆ ಶ್ರೀ ರಂಭಾಪುರಿ ಮತ್ತು ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅನುಷ್ಠಾನ ಪೂರ್ಣಗೊಳಿಸುವರು. ಇದೇ ಸಂದರ್ಭದಲ್ಲಿ ಲಿಂ. ಶ್ರೀ ಸಿದ್ಧಲಿಂಗ ಜಗದ್ಗುರುಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಅವರು ತಪಗೈದ ಬೆಟ್ಟದವರೆಗೆ ನೆರವೇರಿದ ನಂತರ ನಡೆಯುವ ಧರ್ಮ ಸಮಾರಂಭದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ ಮತ್ತು ಶ್ರೀಶೈಲ ಜಗದ್ಗುರುಗಳು ಧರ್ಮ ಸಂದೇಶ ಅನುಗ್ರಹಿಸಲಿದ್ದಾರೆ.

24ರ ಬೆಳಗ್ಗೆ ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲಮೂರ್ತಿಯಲ್ಲದೇ ಜಗದ್ಗುರು ರೇಣುಕಾಚಾರ್ಯರು, ವೀರಭದ್ರಸ್ವಾಮಿ ಮತ್ತು ಮರುಳಸಿದ್ಧೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ ವಿಶೇಷ ಪೂಜೆ ಜರುಗುವುದು. 11 ಗಂಟೆಗೆ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜನಜಾಗೃತಿ ಧರ್ಮಸಮ್ಮೇಳನ ಜರುಗಲಿದ್ದು, ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸುವರು.

Leave a Reply

Your email address will not be published. Required fields are marked *