ಜಾರಕಿಹೊಳಿ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್​ನಿಂದ ದೊಡ್ಡ ಶಾಕ್​: ಕುತೂಹಲ ಮೂಡಿಸಿದ ಬಾಲಚಂದ್ರ ಜಾರಕಿಹೊಳಿ ಮುಂದಿನ ನಡೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಅಸಮಾಧಾನದ ಬಿಸಿ ತಟ್ಟುವ ಲಕ್ಷಣಗಳು ಕಾಣಿಸುತ್ತಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಳಗಾವಿಯ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಗಿರಿ ಕೈತಪ್ಪಿದೆ. ಅದರಲ್ಲೂ 15 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬ ಯಾರೊಬ್ಬರಿಗೂ ಮಂತ್ರಿಭಾಗ್ಯ ದೊರೆಯದಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಪಕ್ಷೇತರ ಶಾಸಕ ಎಚ್​. ನಾಗೇಶ್​ ಸೇರಿ 17 ಶಾಸಕರು ನೂತನ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಗಿರಿ ಖಂಡಿತ ಎಂದುಕೊಂಡಿದ್ದವರಿಗೆ ಬಿಜೆಪಿ ಹೈಕಮಾಂಡ್​​ ಶಾಕ್​ ನೀಡಿದೆ. ಕೊನೆ ಕ್ಷಣದ ಬದಲಾವಣೆಯಲ್ಲಿ ಬಾಲಚಂದ್ರ ಜಾರಕೊಹೊಳಿಯ ಹೆಸರು ಪಟ್ಟಿಯಿಂದ ಕಾಣೆಯಾಗಿರುವುದು ಅಸಮಾಧಾನಕ್ಕೆ ಕಾರಣವಾಗಲಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲೂ ಜಾರಕಿಹೊಳಿ ಭಾಗಿಯಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಪಕ್ಷವಿರೋಧಿ ಹೇಳಿಕೆಯೇ ಮುಳುವಾಯ್ತ?
ಬೆಳಗಾವಿಯಲ್ಲಿ ಎದುರಾಗಿದ್ದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಜಾರಕಿಹೊಳಿ, ಸಂತ್ರಸ್ತರ ಅಳಲನ್ನು ಆಲಿಸುವಾಗ ಮನೆ ಕಟ್ಟಿಕೊಡದಿದ್ದರೆ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದೇ ಹೇಳಿಕೆ ಈಗ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.

ಕೌಟುಂಬಿಕ ಸಚಿವ ಸ್ಥಾನದ ಸಂಪ್ರದಾಯಕ್ಕೆ ಬ್ರೇಕ್
ಕೌಟುಂಬಿಕ ಸಚಿವ ಸ್ಥಾನದ ಸಂಪ್ರದಾಯಕ್ಕೆ ಬಿಜೆಪಿ ಹೈಕಮಾಂಡ್​ ಬ್ರೇಕ್ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್​, ಜೆಡಿಎಸ್​ ಹಾಗೂ ಕಾಂಗ್ರೆಸ್​ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜಾರಕಿಹೊಳಿ ಸಹೋದರರು ಸಚಿವರಾಗುತ್ತಿದ್ದರು. ಹಾಗಾಗಿ ಬಿಜೆಪಿ ಸರ್ಕಾರದಲ್ಲಿ ತಮಗೊಂದು ಸಚಿವ ಸ್ಥಾನ ದೊರೆಯುತ್ತದೆ ಎಂಬುದು ಬಾಲಚಂದ್ರ ಜಾರಕಿಹೊಳಿ ಅವರ ನಿರೀಕ್ಷೆಯಾಗಿತ್ತು. ಆದರೆ ಅವಕಾಶ ದೊರೆಯದಿರುವುದರಿಂದ ಅವರಿಗೆ ದೊಡ್ಡ ಶಾಕ್ ಆಗಿದೆ. ಹೀಗಾಗಿ ಅವರ ಮುಂದಿನ ನಡೆಯ ಭಾರಿ ಕುತೂಹಲ ಮೂಡಿಸಿದೆ.

ಸಮ್ಮಿಶ್ರ ಸರ್ಕಾರ ಬೀಳುವಲ್ಲಿ ಪ್ರಮುಖ ಪಾತ್ರ
ಕಾಂಗ್ರೆಸ್​ ಹಾಗೂ ಜೆಡಿಎಸ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದಲ್ಲಿ ಬಾಲಚಂದ್ರ ಜಾರಕಿಹೊಳಿ ಪಾತ್ರವು ಮುಖ್ಯವಾಗಿತ್ತು. ಅನರ್ಹಗೊಂಡ 17 ಅತೃಪ್ತ ಶಾಸಕರಲ್ಲಿ ಬಾಲಚಂದ್ರ ಸಹೋದರ ರಮೇಶ್​ ಜಾರಕಿಹೊಳಿ ಪ್ರಮುಖರಾಗಿದ್ದರು. ಅಲ್ಲದೆ, ಅತೃಪ್ತ ಶಾಸಕರ ನೇತೃತ್ವವನ್ನು ವಹಿಸಿದ್ದರು. ರಮೇಶ್​ ಜಾರಕಿಹೊಳಿಗೆ ಬಾಲಚಂದ್ರ ಜಾರಕಿಹೊಳಿ ಒತ್ತಾಸೆಯಾಗಿ ನಿಂತಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *