ಬಾಳದಲ್ಲಿ ಕಾಡಲಿದೆ ನೀರಿನ ಸಮಸ್ಯೆ

>

ಲೋಕೇಶ್ ಸುರತ್ಕಲ್
ನೀರು ಪೂರೈಕೆಗೆ ಬೋರ್‌ವೆಲ್, ತೆರೆದ ಬಾವಿ, ಮಳವೂರು ಡ್ಯಾಂ ಅವಲಂಬಿಸಿರುವ ಬಾಳ ಗ್ರಾಮ ಪಂಚಾಯಿತಿಗೆ ಈ ವರ್ಷ ಬೋರ್‌ವೆಲ್, ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಕಾರಣ ನೀರಿನ ಸಮಸ್ಯೆ ಕಾಡಲಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಟ್ಯಾಂಕರ್ ನೀರು ಪೂರೈಕೆ ಆರಂಭಿಸುವ ಸಾಧ್ಯತೆಯಿದೆ.
ಪಂಚಾಯಿತಿ ಬೃಹತ್ ಉದ್ಯಮಗಳಿಗೆ ಬಹುಪಾಲು ಭೂಮಿ ಕಳೆದುಕೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3,752 ಜನಸಂಖ್ಯೆಯಿದೆ. ಕಳವಾರು, ಬಾಳದಲ್ಲಿ ತಲಾ ನಾಲ್ಕು ಬೋರ್‌ವೆಲ್‌ಗಳಿದ್ದು ಪಂಪ್ ಆಧಾರಿತ ಬಾವಿಗಳು ಎರಡೂ ಗ್ರಾಮಗಳಲ್ಲಿ ತಲಾ ಒಂದರಂತಿವೆ. ಬಾಳದಲ್ಲಿ 1, ಕಳವಾರಿನಲ್ಲಿ 2 ತೆರೆದ ಬಾವಿಗಳಿವೆ. ಬಾಳದಲ್ಲಿ ಚುನಾವಣೆ ಬಳಿಕ ಬೋರ್‌ವೆಲ್ ತೋಡುವ ಸಾಧ್ಯತೆ ಇದೆ. ಇದಕ್ಕಾಗಿ 14ನೇ ಹಣಕಾಸು ಯೋಜನೆಯಲ್ಲಿ 2.5 ಲಕ್ಷ ರೂ. ಮೀಸಲಿರಿಸಲಾಗಿದೆ.
ಬಾಳ ಪದವಿಗೆ ಈ ಹಿಂದೆ ಪಾಲಿಕೆ ನೀರು ಪೂರೈಸಲ್ಪಡುತ್ತಿದ್ದು, ಈಗ ಮಳವೂರು ಡ್ಯಾಂ ನೀರು ಪೂರೈಕೆ ಆರಂಭ ಕಾರಣ ಪಾಲಿಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಮಳವೂರು ಡ್ಯಾಂನಿಂದ ಬಾಳಕ್ಕೆ ಹಾಗೂ ಕಳವಾರಿಗೆ ಎರಡು ದಿನಕ್ಕೆ ತಲಾ 50 ಸಾವಿರ ಲೀಟರ್‌ನಂತೆ ಪೂರೈಕೆಯಾಗುತ್ತಿದೆ.

ಬೋರ್‌ವೆಲ್‌ನಿಂದ ಕೆಂಬಣ್ಣದ ನೀರು: ಕಳವಾರಿನಲ್ಲಿ ಸುಮಾರು 100- 150 ಮನೆಗಳಿದ್ದು ಬೋರ್‌ವೆಲ್‌ನಿಂದ ಕೆಂಪುಬಣ್ಣದ ನೀರು ಪೂರೈಕೆಯಾಗುತ್ತಿದೆ. ಮಳವೂರು ಡ್ಯಾಂ ನೀರು ಪೂರೈಕೆ ಕಾರಣ ನಿವಾಸಿಗಳು ಸದ್ಯ ಬಚಾವ್ ಆಗಿದ್ದಾರೆ.

ಬೃಹತ್ ಉದ್ಯಮಗಳು ಸಿಎಸ್‌ಆರ್ ಫಂಡ್‌ನಿಂದ ನೀರು ಪೂರೈಸಿ ನೆರವಾಗಲಿ.
ಫ್ರಾನ್ಸಿಸ್, ಗ್ರಾಪಂ ಸದಸ್ಯ

ಕಳವಾರಿನಲ್ಲಿ ಬೋರ್‌ವೆಲ್ ನೀರು ಬಣ್ಣಯುಕ್ತವಾಗಿರುವುದು ನಿಜ. ಕಳವಾರಿಗೆ ನೀರು ಪೂರೈಕೆಗೆ ಸರ್ಕಾರಿ ಬಾವಿ ನೀರು ಕಾದಿರಿಸಿದ್ದೇವೆ.
ಬಿ.ಆದಂ, ಪಂಚಾಯಿತಿ ಅಧ್ಯಕ್ಷ