ಮೋದಿ ರಾಜತಂತ್ರಕ್ಕೆ ಬಾಜ್ವಾ ಭಯೋತ್ಪಾದಕ ಪ್ರತಿತಂತ್ರ

ಕಾಶ್ಮೀರ ಸಮಸ್ಯೆ ಬಿಗಡಾಯಿಸಿರುವುದೇ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದ ಎಂಬ ಭಾರತದ ಮಾತನ್ನೂ ಯಾರೂ ಕೇಳುತ್ತಿರಲಿಲ್ಲ. ಆದರೆ ಶತಮಾನದ ಅಂತ್ಯದ ಹೊತ್ತಿಗೆ ಪರಿಸ್ಥಿತಿ ಬದಲಾಗತೊಡಗಿತು. ಕ್ರಮೇಣ ಪಾಕಿಸ್ತಾನದ ನಿಜರೂಪ ಜಗತ್ತಿನೆದುರು ಪೂರ್ಣವಾಗಿ ಬೆತ್ತಲಾಯಿತು.

ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗಾಗಿ ಮಾತುಕತೆಗಳನ್ನು ಆರಂಭಿಸುವ ಅಗತ್ಯದ ಕುರಿತಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಭಾರತದ ಪ್ರಧಾನಮಂತ್ರಿಗೆ, ಪಾಕಿಸ್ತಾನದ ವಿದೇಶಮಂತ್ರಿ ಭಾರತದ ವಿದೇಶಮಂತ್ರಿಗೆ ಪತ್ರ ಬರೆಯುತ್ತಾರೆ. ಆದರೆ ಆ ಪತ್ರಗಳಿಗೆ ಭಾರತದ ಪ್ರಧಾನಮಂತ್ರಿ ಮತ್ತು ವಿದೇಶಮಂತ್ರಿ ಉತ್ತರಿಸುವುದಿಲ್ಲ. ನಂತರ, ಉಭಯದೇಶಗಳ ಪ್ರಧಾನಮಂತ್ರಿಗಳು ಅಂತಾರಾಷ್ಟ್ರೀಯ ಬಹುಪಕ್ಷೀಯ ಸಮಾವೇಶವೊಂದರಲ್ಲಿ ಭಾಗವಹಿಸುತ್ತಾರೆ, ಆದರೆ ಇಬ್ಬರ ನಡುವೆ ಮಾತುಕತೆಯಿಲ್ಲ, ಹಸ್ತಲಾಘವವೂ ಇಲ್ಲ! ಇದು ಮೇ 23ರಿಂದೀಚೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಸಾಗುತ್ತಿರುವ ಬಗೆ.

ದಕ್ಷಿಣ ಏಶಿಯಾದ ಈ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಹೊಕ್ಕು ಬಳಕೆಯ ಸ್ವರೂಪ ಈಗ ಏಕಾಏಕಿ ಬದಲಾಗಿಹೋಗಿದೆ. 1990ರ ದಶಕದ ಆದಿ ಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ಆರಂಭವಾದಂದಿನಿಂದ ಮೊಟ್ಟಮೊದಲ ಬಾರಿಗೆ ಭಾರತ ತನ್ನ ಪಶ್ಚಿಮದ ನೆರೆನಾಡಿನೊಂದಿಗೆ ರಾಜತಾಂತ್ರಿಕವಾಗಿ ಅತ್ಯಂತ ಕಟುವಾಗಿ ವರ್ತಿಸತೊಡಗಿದೆ. ಮಾತುಕತೆಗಳಿಂದ, ಮೃದುನೀತಿಯಿಂದ ಲೇಶಮಾತ್ರವೂ ಪ್ರಯೋಜನವಿಲ್ಲ ಎಂದು ಪ್ರಸಕ್ತ ಮೋದಿ ಸರ್ಕಾರ ನಿರ್ಧರಿಸಿದಂತಿದೆ. ಈ ನಿರ್ಧಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇನೂ ಏಕಾಏಕಿ ಬರಲಿಲ್ಲ ಎನ್ನುವುದು ಕಳೆದೈದು ವರ್ಷಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸ್ಪಷ್ಟವಾಗಿ ತಿಳಿಯುತ್ತದೆ. ತಾವು ಮೊದಲ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಮೋದಿ ಪಾಕಿಸ್ತಾನವೂ ಸೇರಿದಂತೆ ಸಾರ್ಕ್ ದೇಶಗಳ ನಾಯಕರನ್ನು ಆಹ್ವಾನಿಸಿದ್ದರು. ಅದರ ಮೂಲಕ ಮೋದಿ ಸೂಚಿಸಹೊರಟಿದ್ದು ನೆರೆಹೊರೆಯಲ್ಲಿ ಶಾಂತಿ ಸೌಹಾರ್ದಕ್ಕೆ ತಾವು ನೀಡಲಿರುವ ಮಹತ್ವವನ್ನು. ಆದರೆ ಆಗ ಇಸ್ಲಾಮಾಬಾದ್​ನಿಂದ ಬಂದ ಪ್ರತಿಕ್ರಿಯೆಯೇನು? ಎರಡೇ ತಿಂಗಳಲ್ಲಿ ಪಾಕ್ ಸೇನೆ ಗಡಿಯಲ್ಲಿ ಶೆಲ್ ದಾಳಿ ಆರಂಭಿಸಿತು. ಮುಂದಿನ ತಿಂಗಳು ನವದೆಹಲಿಯಲ್ಲಿನ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಭಾರತ ಸರ್ಕಾರದ ಸಲಹೆಯನ್ನು ನಿರ್ಲಕ್ಷಿಸಿ ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್ ನಾಯಕರನ್ನು ಭೇಟಿಯಾದರು. ಪ್ರಮಾಣವಚನ ಸಂದರ್ಭದಲ್ಲಿ ಮೋದಿ ತೋರಿದ ಸದ್ಭಾವನೆಯ ಆಶಯವನ್ನು ಮಣ್ಣುಗೂಡಿಸುವ ಕೃತ್ಯಗಳಿವು. ಇದು ಇಲ್ಲಿಗೇ ನಿಲ್ಲುವುದಿಲ್ಲ. ವರ್ಷದ ನಂತರ 2015ರ ಕ್ರಿಸ್​ವುಸ್ ದಿನ ಕಾಬೂಲ್​ನಿಂದ ಸ್ವದೇಶಕ್ಕೆ ಹಿಂತಿರುಗುತ್ತಿದ್ದ ಮೋದಿ ಇಸ್ಲಾಮಾಬಾದ್​ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪಾಕ್ ಪ್ರಧಾನಿ ನವಾಜ್ ಶರೀಫ್​ರನ್ನು ಅಭಿನಂದಿಸಿದರು. ಆ ಮೂಲಕ ಅವರು ಪರಸ್ಪರ ವಿಶ್ವಾಸವರ್ಧನೆಗೆ ತಾವು ನೀಡುತ್ತಿರುವ ಮಹತ್ವವನ್ನು ಮತ್ತೊಮ್ಮೆ ಪ್ರದರ್ಶಿಸಿದರು. ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ?

ಮುಂದಿನ ಒಂದೇ ವಾರದಲ್ಲಿ ಪಾಕಿಸ್ತಾನದ ಐಎಸ್​ಐ ನಿಂದ ಬೆಂಬಲ ಪಡೆದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಪಠಾನ್​ಕೋಟ್ ವಾಯುನೆಲೆ ಮೇಲೆ ದಾಳಿಯೆಸಗಿದರು! ಸ್ನೇಹದಿಂದ ಚಾಚಿದ ಕೈಯನ್ನು ಕುಟುಕುವ ಈ ಪಾಕ್ ಕೃತ್ಯ ಮೋದಿಯವರ ಮನಸ್ಸಿನ ಮೇಲೆ ಆಳ ಪ್ರಭಾವ ಬೀರಿದಂತೆ ಕಾಣುತ್ತದೆ. ನಂತರದ ದಿನಗಳಲ್ಲಿ ಪಾಕಿಸ್ತಾನ ಕುರಿತಂತೆ ಮೋದಿ ಎಚ್ಚರಿಕೆಯ ಹೆಜ್ಜೆ ಇಡಲಾರಂಭಿಸಿದರು. ಸೆಪ್ಟೆಂಬರ್ 2016ರಲ್ಲಿ ಐಎಸ್​ಐ/ಪಾಕ್ ಸೇನೆ ಬೆಂಬಲಿತ ಜೆಇಎಂ ಉಗ್ರರು ಉರಿ ಸೇನಾನೆಲೆ ಮೇಲೆ ದಾಳಿಯೆಸಗಿದ್ದೇ ಮೋದಿ ಪ್ರತಿಕಾರ್ಯಾಚರಣೆಗೆ ಸೇನೆಗೆ ಅನುಮತಿ ನೀಡಿಯೇಬಿಟ್ಟರು. ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ಸೇನೆ ಎಸಗಿದ ಸರ್ಜಿಕಲ್ ಕಾರ್ಯಾಚರಣೆಯೊಂದು ಅಭೂತಪೂರ್ವ ಘಟನೆ. 1987ರಲ್ಲಿ ಅಣ್ವಸ್ತ್ರಗಳನ್ನು ಗಳಿಸಿಕೊಂಡಾಗಿನಿಂದ ಇಂತಹ ಪ್ರತೀಕಾರ ಕಾರ್ಯಾಚರಣೆಗಳಿಗೆ ಅವಕಾಶವೇ ಇಲ್ಲದಂತಾಗಿತ್ತು. ಕಾಶ್ಮೀರದಲ್ಲಿನ ಕರಾಳ ಕೃತ್ಯಗಳಿಗಾಗಿ ಪಾಕ್ ನೆಲದಲ್ಲಿ ಬೀಡುಬಿಟ್ಟ ಉಗ್ರರ ವಿರುದ್ಧ ಭಾರತೀಯ ಸುರಕ್ಷಾಪಡೆಗಳು ಕಾರ್ಯಾಚರಣೆ ಕೈಗೊಳ್ಳಹೊರಟಾಗೆಲ್ಲಾ ಪಾಕಿಸ್ತಾನ ಅಣ್ವಸ್ತ್ರಗಳನ್ನು ಮುಂದೆ ಮಾಡಿ ಹೆದರಿಸುತ್ತಿತ್ತು. ಹೀಗಾಗಿಯೇ ಕಾಲು ಶತಮಾನಕ್ಕಿಂತಲೂ ಅಧಿಕ ಕಾಲದವರೆಗೆ ಕಾಶ್ಮೀರದಲ್ಲಿ ಭಯೋತ್ಪಾದನಾ ರಕ್ತದೋಕುಳಿ ನಿರಂತರವಾಗಿ ಸಾಗಿಬಂದದ್ದು. ಅಚ್ಚರಿಯೆಂದರೆ ಸರ್ಜಿಕಲ್ ಕಾರ್ಯಾಚರಣೆ ನಡೆದೇಬಿಟ್ಟಾಗ ಪಾಕಿಸ್ತಾನ ತನ್ನ ಅಣ್ವಸ್ತ್ರಗಳನ್ನು ಝುಳಪಿಸಲಿಲ್ಲ! ಇಷ್ಟು ಕಾಲ ಪಾಕಿಸ್ತಾನದ ಬಗ್ಗೆ ಭಾರತೀಯ ಸರ್ಕಾರ ಮತ್ತು ಸೇನೆಯಲ್ಲಿದ್ದ ಭಯ ನಿರಾಧಾರವೆಂದು ಹೀಗೆ ಸಾಬೀತಾಯಿತು. ಈ ಅರಿವು ಪಾಕಿಸ್ತಾನದ ಕುರಿತಾಗಿನ ಭಾರತೀಯ ಚಿಂತನೆಯಲ್ಲಿ ಕಾಣಬರುವ ಅತ್ಯಂತ ಮಹತ್ವದ ತಿರುವು. ಈ ವರ್ಷದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕರು ಸೇನಾ ವಾಹನಗಳ ಮೇಲೆ ಎಸಗಿದ ದಾಳಿಗೆ ಪ್ರತಿಯಾಗಿ ಪಾಕ್ ನೆಲದ ಮೇಲೇ ವಾಯುದಾಳಿ ನಡೆಸುವ ಧೈರ್ಯವನ್ನು ಭಾರತೀಯ ಸೇನೆಗೆ ನೀಡಿದ್ದು ಈ ಅರಿವು.

ಉರಿ ಮತ್ತು ಪುಲ್ವಾಮಾಗಳ ನಡುವಿನ ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ, ಮುಖ್ಯವಾಗಿ ಕಳೆದ ಆಗಸ್ಟ್​ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಪಟ್ಟಕ್ಕೇರಿದಂದಿನಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗಮನಾರ್ಹ ಏರುಪೇರುಗಳಾಗಿವೆ. ಅಧಿಕಾರ ವಹಿಸಿಕೊಂಡ ತಿಂಗಳೊಳಗೆ ಇಮ್ರಾನ್ ಖಾನ್ ದ್ವಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸಬೇಕೆಂದು, ಅದನ್ನು ಸೆಪ್ಟೆಂಬರ್ ಅಂತ್ಯದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ದೇಶಗಳ ವಿದೇಶಮಂತ್ರಿಗಳು ಭೇಟಿಯಾಗುವ ಮೂಲಕ ಆರಂಭಿಸಬೇಕೆಂದು ನರೇಂದ್ರ ಮೋದಿಯವರಿಗೆ ಪತ್ರವನ್ನೇನೋ ಬರೆದರು. ಆದರೆ ಮಾತುಕತೆಗಳ ಪುನರಾರಂಭಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ವಿುಸುವ ಬದಲಾಗಿ ಅದಕ್ಕೆ ವಿರುದ್ಧವಾದ ನಡೆಗಳು ಆ ದಿನಗಳಲ್ಲಿ ಪಾಕಿಸ್ತಾನದ ಕಡೆಯಿಂದ ಬರತೊಡಗಿದ್ದವು. ಭಯೋತ್ಪಾದಕರನ್ನು ಗೌರವಿಸುವ 20 ಅಂಚೆಚೀಟಿಗಳನ್ನು ಪಾಕಿಸ್ತಾನ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತ್ತು ಮತ್ತು ಕಾಶ್ಮೀರದಲ್ಲಿ ಮುಂದುವರಿದ ಪಾಕ್ ಪ್ರೇರಿತ ಭಯೋತ್ಪಾದನೆಗೆ ಆಗಷ್ಟೇ ಭಾರತೀಯ ಸುರಕ್ಷಾ ಪಡೆಗಳ ಮೂವರು ಸದಸ್ಯರು ಬಲಿಯಾಗಿದ್ದರು. ಹೀಗೆ, ಭಯೋತ್ಪಾದನೆಯ ಅಂತ್ಯಕ್ಕೆ ಹಾಗೂ ಉಭಯ ದೇಶಗಳ ನಡುವೆ ವಿಶ್ವಾಸವೃದ್ಧಿಗೆ ಇಮ್ರಾನ್ ಖಾನ್ ಯಾವುದೇ ಧನಾತ್ಮಕ ನೀತಿ ಅನುಸರಿಸದ್ದನ್ನು ಉಲ್ಲೇಖಿಸಿ ಭಾರತ ನ್ಯೂಯಾರ್ಕ್​ನಲ್ಲಿ ನಡೆಯಬೇಕೆಂದಿದ್ದ ವಿದೇಶಮಂತ್ರಿಗಳ ಭೇಟಿಯನ್ನು ರದ್ದುಗೊಳಿಸಿತು. ಇದಕ್ಕೆ ಇಮ್ರಾನ್ ಖಾನ್​ರ ಪ್ರತಿಕ್ರಿಯೆ ಈ ಟ್ವೀಟ್- ‘ಶಾಂತಿ ಮಾತುಕತೆಗಳ ಪುನರಾರಂಭಕ್ಕಾಗಿನ ನನ್ನ ಕರೆಗೆ ಭಾರತದ ಉದ್ಧಟತನದ ಹಾಗೂ ಋಣಾತ್ಮಕ ಪ್ರತಿಕ್ರಿಯೆಯಿಂದ ನನಗೆ ನಿರಾಶೆಯಾಗಿದೆ. ಆದಾಗ್ಯೂ, ಪೂರ್ಣ ಚಿತ್ರವನ್ನು ಗ್ರಹಿಸುವ ದೃಷ್ಟಿಯಿಲ್ಲದ ಸಣ್ಣ ವ್ಯಕ್ತಿಗಳು ದೊಡ್ಡ ಸ್ಥಾನಗಳಿಗೇರಿ ಕೂರುವುದನ್ನು ನನ್ನ ಬದುಕಿನುದ್ದಕ್ಕೂ ನೋಡಿಯೇ ಇದ್ದೇನೆ.’ ಒಬ್ಬ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ 2018ರ ಸೆ.23ರ ಮಧ್ಯಾಹ್ನ ಮಾಡಿದ ಈ ಟ್ವೀಟ್ ಅತ್ಯಂತ ಬೇಜವಾಬ್ದಾರಿಯುತ ಹಾಗೂ ಋಣಾತ್ಮಕವಾಗಿತ್ತು. ಆದರೆ ಇದೇ ಇಮ್ರಾನ್ ಖಾನ್ ಐದೇ ತಿಂಗಳಲ್ಲಿ ರಾಗ ಬದಲಾಯಿಸಿ, ಅದೂ ಪುಲ್ವಾಮಾ ದಾಳಿ ಹಾಗೂ ಬಾಲಾಕೋಟ್ ಸರ್ಜಿಕಲ್ ಕಾರ್ಯಾಚರಣೆಗಳಾದ ಒಂದೂವರೆ ತಿಂಗಳ ನಂತರ, ಭಾರತ – ಪಾಕಿಸ್ತಾನ ಸಂಬಂಧ ವೃದ್ಧಿಗೆ ಮೋದಿ ಮತ್ತೆ ಪ್ರಧಾನಿಯಾಗುವುದು ಅಗತ್ಯ ಎಂದು ಹೇಳಿದ್ದನ್ನು ವಿಶ್ವಾಸದಿಂದ ನೋಡಲು ಭಾರತೀಯ ನಾಯಕರು ತಯಾರಿರಲಿಲ್ಲ. ನಿಜ ಹೇಳಬೇಕೆಂದರೆ, ಭಾರತದ ಲೋಕಸಭಾ ಚುನಾವಣೆಗಳು ಆರಂಭವಾಗುತ್ತಿದ್ದ ಗಳಿಗೆಯಲ್ಲಿ ಇಮ್ರಾನ್​ರಿಂದ ಬಂದ ಒಳ್ಳೆಯ ಮಾತುಗಳು ಮೋದಿಯವರ ಬಗ್ಗೆ ಮತದಾರದಲ್ಲಿ ಅಪನಂಬಿಕೆ ಉಂಟುಮಾಡುವ, ಆ ಮೂಲಕ ಅವರು ಮತ್ತೆ ಪ್ರಧಾನಿಯಾಗುವುದನ್ನು ತಡೆಯುವ ಹುನ್ನಾರವೆಂದೇ ಭಾವಿಸಲು ಅವಕಾಶವೂ ಆಯಿತು. ಮನುಷ್ಯನೊಬ್ಬ ವಿಶ್ವಾಸ ಕಳೆದುಕೊಳ್ಳುವುದು ಹೀಗೆ. ಹೀಗಾಗಿಯೇ ಇಂದು ಶಾಂತಿ ಮಾತುಕತೆಯ ಬಗ್ಗೆ ಇಮ್ರಾನ್ ಖಾನ್ ಮತ್ತವರ ವಿದೇಶಮಂತ್ರಿ ಪತ್ರ ಬರೆದರೆ ದೆಹಲಿಯಲ್ಲಿ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಪ್ರಸಕ್ತ ಪಾಕ್ ಸರ್ಕಾರವನ್ನು ಪ್ರಸಕ್ತ ಭಾರತ ಸರ್ಕಾರ ನಿರ್ಲಕ್ಷಿಸುವುದಕ್ಕೆ ಎರಡು ದೇಶಗಳ ಬಗ್ಗೆ ಹೊರಜಗತ್ತಿನ ಚಿಂತನೆಯಲ್ಲಿ ಆಗಿರುವ ಅಗಾಧ ಬದಲಾವಣೆಯೂ ಕಾರಣವಾಗಿದೆ. 1990ರ ದಶಕದಲ್ಲಿ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಂತೆ ಬಿಂಬಿಸುವುದರಲ್ಲಿ, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಜಾಗತಿಕ ಶಾಂತಿಗೆ ಅಪಾಯವಿದೆಯೆಂದು ಹೆದರಿಕೆ ಹುಟ್ಟಿಸುವುದರಲ್ಲಿ ಪಾಕಿಸ್ತಾನ ಯಶಸ್ವಿಯಾಗಿತ್ತು. ಅಮೆರಿಕಾದ ಅಧ್ಯಕ್ಷ ಕ್ಲಿಂಟನ್ ಅಂತೂ ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಾ, ಕಾಶ್ಮೀರವನ್ನು ಪ್ಯಾಲೆಸ್ತೈನ್ ಹಾಗೂ ಚೆಚೆನ್ಯಾಗಳಿಗೆ ಹೋಲಿಸಿದ್ದರು! ಕಾಶ್ಮೀರ ಸಮಸ್ಯೆ ಬಿಗಡಾಯಿಸಿರುವುದೇ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದ ಎಂಬ ಭಾರತದ ಮಾತನ್ನೂ ಯಾರೂ ಕೇಳುತ್ತಿರಲಿಲ್ಲ. ಆದರೆ ಶತಮಾನದ ಅಂತ್ಯದ ಹೊತ್ತಿಗೆ ಪರಿಸ್ಥಿತಿ ಬದಲಾಗತೊಡಗಿತು. ಕಾರ್ಗಿಲ್ ಯುದ್ಧಕ್ಕೆ ಪಾಕಿಸ್ತಾನವೇ ಕಾರಣವೆಂದು ಜಗತ್ತಿಗೆ ಮನದಟ್ಟಾದ ಕಾರಣ ಚೀನಾವೂ ಸೇರಿದಂತೆ ಪ್ರಮುಖ ದೇಶಗಳೆಲ್ಲವೂ ಅದಕ್ಕೆ ಛೀಮಾರಿ ಹಾಕಿದವು. ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದಾಗಿ ಪ್ರಧಾನಿ ನವಾಜ್ ಶರೀಫ್ ಹೇಳಿದಾಗ ಅಧ್ಯಕ್ಷ ಕ್ಲಿಂಟನ್ ಬೈದು ಸುಮ್ಮನಿರಿಸಿದರು. ನಂತರ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಅಮೆರಿಕದಿಂದ ಹೇರಳ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಲೇ ಪಾಕಿಸ್ತಾನ ಗುಟ್ಟಾಗಿ ಅಲ್-ಖಯೀದಾ ಮತ್ತು ತಾಲಿಬಾನ್​ಗಳಿಗೆ ಸಹಕಾರ ನೀಡುತ್ತಿದ್ದದ್ದೂ, ಒಸಾಮಾ ಬಿನ್ ಲಾದೆನ್ ಪಾಕ್ ರಾಜಧಾನಿಗೆ ಅನತಿ ದೂರದ ಅಬ್ಬೊಟಾಬಾದ್​ನಲ್ಲಿ ಪಾಕ್ ಸೇನೆಯ ರಕ್ಷಣೆಯಲ್ಲೇ ಅಡಗಿದ್ದುದು ಪತ್ತೆಯಾದಾಗ ಪಾಕಿಸ್ತಾನದ ನಿಜರೂಪ ಜಗತ್ತಿನೆದುರು ಪೂರ್ಣವಾಗಿ ಬೆತ್ತಲಾಯಿತು. ಪರಿಣಾಮವಾಗಿ ನವೆಂಬರ್ 2008ರ ಮುಂಬೈ ದಾಳಿಗಳಾದಾಗ ಭಾರತದ ಬಗ್ಗೆ ಬಾಯಿಮಾತಿನ ಸಂತಾಪ ವ್ಯಕ್ತಪಡಿಸಲೂ ಹಿಂಜರಿದಿದ್ದ ದೇಶಗಳು ಇಂದು ಪುಲ್ವಾಮಾ ಹತ್ಯೆಗಳಾದಾಗ ಪೂರ್ಣವಾಗಿ ಭಾರತದ ಪರ ನಿಂತಿವೆ, ಭಾರತದ ಸರ್ಜಿಕಲ್ ವಾಯುದಾಳಿಯನ್ನು ಸಮರ್ಥಿಸಿವೆ. ಪ್ರಮುಖ ಮುಸ್ಲಿಂ ದೇಶಗಳೂ ಭಾರತದ ಪರವಾಗಿ ದನಿಯೆತ್ತಿವೆ. ಹೀಗೆ ಜಗತ್ತು ಭಾರತದ ಪರವಾಗಿರುವುದು ಸಹಜವಾಗಿಯೇ ಪಾಕಿಸ್ತಾನದ ಬಗ್ಗೆ ಕಟುವಾದ ನೀತಿಯನ್ನು ಅನುಸರಿಸುವ ಉತ್ಸಾಹವನ್ನು ಮೋದಿಯವರಲ್ಲಿ ಮೂಡಿಸಿದೆ. ಭಾರತದ ಅದೃಷ್ಟವೆಂದರೆ ಸರಿಯಾದ ಸಮಯದಲ್ಲಿ ಸರಿಯಾದ ನಾಯಕತ್ವ ಭಾರತಕ್ಕೊದಗಿದೆ. ಪರಿಣಾಮವಾಗಿ, ಪ್ರಧಾನಿ ಮೋದಿ ಪಾಕ್ ಪ್ರಧಾನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ.

ಇದಕ್ಕೆ ಪಾಕಿಸ್ತಾನ ಹೇಗೆ ಪ್ರತಿಕ್ರಿಯಿಸಬಹುದು? ‘ನನ್ನ ಪತ್ರಗಳಿಗೆ ಮೋದಿಯವರು ಉತ್ತರಿಸುತ್ತಿಲ್ಲ’ ಎಂದು ಇಮ್ರಾನ್ ಖಾನ್ ಸಾರ್ವಜನಿಕವಾಗಿ ನಿರಾಶೆ ವ್ಯಕ್ತಪಡಿಸಿದರು. ಅದು ಸಾಲದು ಎಂಬಂತೆ ಕಳೆದ ವಾರಾಂತ್ಯದಲ್ಲಿ ಬಿಶ್ಕೆಕ್​ನಲ್ಲಿ ಎಸ್​ಸಿಓ ಸಮಾವೇಶದಲ್ಲಿ ಮೋದಿಯವರು ಮಾತನಾಡುತ್ತಿದ್ದಾಗ ತಾವು ಗೊಂದಲದಿಂದಲೋ ಅಸಹನೆಯಿಂದಲೋ ಮೈಕ್ರೋಫೋನ್​ನಲ್ಲಿ ಗೊಣಗಾಟ ನಡೆಸಿ ನಗೆಪಾಟಲಿಗೀಡಾದದ್ದಲ್ಲದೇ ಚೀನೀ ಅಧ್ಯಕ್ಷರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಆದರಿಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು ಪಾಕ್ ಸೇನೆಯ ನಡೆಗಳನ್ನು. ಇಮ್ರಾನ್ ಖಾನ್ ಸೇನೆಯ ಕೈಗೊಂಬೆ. ಕಳೆದ ಜುಲೈನಲ್ಲಿ ನಡೆದ ಚುನಾವಣೆಗಳಲ್ಲಿ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇ ಸೇನೆಯ ಕರಾಮತ್​ನಿಂದ. ನವಾಜ್ ಶರೀಫ್​ರ ಪಿಎಂಎಲ್(ಎನ್) ಪಕ್ಷದ ಗೆಲ್ಲುವ ಕುದುರೆಗಳನ್ನು ಇಮ್ರಾನ್​ರ ಪಕ್ಷಕ್ಕೆ ಪಕ್ಷಾಂತರ ಮಾಡಿಸಿದ್ದು, ಚುನಾವಣೆಗಳಲ್ಲಿ ವ್ಯಾಪಕ ರಿಗಿಂಗ್ ನಡೆಸಿ ಇಮ್ರಾನ್​ರ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ದೊರಕಿಸಿದ್ದು ಸೇನೆ. ಆದರೀಗ ತನ್ನ ಕೈಗೊಂಬೆಗೆ ಯಾರೂ ಮೂರುಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ ಎಂದರಿವಾಗುತ್ತಿದ್ದಂತೇ ಸೇನಾ ದಂಡನಾಯಕ ಕಮರ್ ಜಾವೆದ್ ಬಾಜ್ವಾ ಪರಿಸ್ಥಿತಿಯನ್ನು ತಮ್ಮ ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೇ ಭಾನುವಾರ ಸೇನೆಯಲ್ಲಿ ಘಟಿಸಿದ ಮಹತ್ವದ ಬದಲಾವಣೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.

ಐಎಸ್​ಐ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಸೀಫ್ ಮುನೀರ್ ಅವರಿಗೆ ಕೇವಲ ಎಂಟೇ ತಿಂಗಳಲ್ಲಿ ಎತ್ತಂಗಡಿಯಾಗಿದೆ. ಅವರ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಬಂದಿದ್ದಾರೆ. ಈ ಹಮೀದ್ ದಂಡನಾಯಕ ಬಾಜ್ವಾರ ಬಲಗೈ ಬಂಟ. ಹಿಂದಿನ ಪಿಎಂಎಲ್(ಎನ್) ಸರ್ಕಾರಕ್ಕೆ ಇನ್ನಿಲ್ಲದ ಕಾಟ ಕೊಡುವ, ಅದು ಚುನಾವಣೆಗಳಲ್ಲಿ ಸೋಲುವಂತೆ ಮಾಡುವ ಬಾಜ್ವಾರ ಯೋಜನೆಗಳನ್ನೆಲ್ಲಾ ಕಾರ್ಯರೂಪಕ್ಕಿಳಿಸಿದ್ದು ಹಮೀದ್. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಭಯೋತ್ಪಾದಕ ಸಂಘಟನೆಗಳ ಜತೆ ಹಮೀದ್​ರ ಸಂಬಂಧಗಳು ಅತಿ ಘನಿಷ್ಟ ಹಾಗೂ ನಿರ್ಣಾಯಕ. ಇದರರ್ಥ, ಮೋದಿ ತೋರುತ್ತಿರುವ ರಾಜಕೀಯ ಹಾಗೂ ರಾಜತಾಂತ್ರಿಕ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಕಾಶ್ಮೀರದಲ್ಲಿ ಭಾರತದ ಸಂಕಷ್ಟಗಳನ್ನು ಏರಿಸುವುದು ಪಾಕ್ ಸೇನೆಯ ಯೋಜನೆ. ಮೋದಿ ಸರ್ಕಾರ ಎಚ್ಚರಿಕೆಯಿಂದ ಗಮನಿಸಬೇಕಾದ ಬೆಳವಣಿಗೆ ಇದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *