ಸಿನಿಮಾ

ಬಜರಂಗದಳ ನಿಷೇಧಿಸಲು ತಾಕತ್ತಿದೆಯಾ? – ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್


ಬೆಳಗಾವಿ: ಬಜರಂಗದಳದ ನಿಷೇಧ ಮಾಡುವ ಹಕ್ಕು, ಧೈರ್ಯ ಯಾರಿಗೂ ಇಲ್ಲ. ನಿಷೇಧ ಮಾಡಿದರೆ ಅದರ ಪರಿಣಾಮ ನೋಡಲಿ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುಡುಗಿದರು.

ನಗರದ ಟಿಳಕ ಚೌಕ್‌ನಲ್ಲಿ ಗುರುವಾರ ಆಯೋಜಿಸಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಬಂದರೆ ಬಜರಂಗದಳ ನಿಷೇಧ ಮಾಡುತ್ತೇವೆಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ತಾಕತ್ ಇದೆಯಾ ಎಂದು ಪ್ರಶ್ನಿಸಿದರು.

ಖರ್ಗೆ ಅವರು ಸುದ್ದಿಗೋಷ್ಠಿ ವೇಳೆ ಯಾವ ರೀತಿ ಕುಂಕುಮ ಅಳಿಸಿಕೊಂಡರು ಗೊತ್ತಿಲ್ಲ. ಈ ದೇಶದಲ್ಲಿ ಕುಂಕುಮ ಹಚ್ಚಿಕೊಳ್ಳಲು ನಾಚಿಕೊಳ್ಳುವವರನ್ನು ಆಯ್ಕೆ ಮಾಡಬೇಕಾ? ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡುತ್ತಿರುವವರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು ಎಂದರು.

ನಾವೆಲ್ಲ ಬಜರಂಗಬಲಿ ಭಕ್ತರು. ಬಜರಂಗಬಲಿಗೆ ತನ್ನ ಶಕ್ತಿ ತೋರಿಸುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ನಿಯತ್ತು ಹೇಗಿದೆ ಎಂದರೆ, ರಾಮಸೇತು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಅಂತ ಅಫಿಡವಿಟ್ ಸಲ್ಲಿಸಿದರು.
ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಕಾಂಗ್ರೆಸ್. ರಾಮ ಮಂದಿರ ಸ್ಥಾಪನೆ ಮಾಡುತ್ತಿರುವ ನಮ್ಮ ಪಕ್ಷ. ಬಜರಂಗಳ ನಿಷೇಧಿಸಲು ತಾಕತ್ತಿದೆಯೇ? ಕಾಂಗ್ರೆಸ್ ನಾಯಕರಿಗೆ ಭಜರಂಗದಳ ನಿಷೇಧ ಮಾಡಲು ಸಾಧ್ಯವಿಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿ ಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಭಜರಂಗಿ ನಮ್ಮ ಹಿಂದು ಸಂಸ್ಕೃತಿಯ ಅಸ್ಮಿತೆ. ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು.

ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಮಾತನಾಡಿ ಹಿಂದುತ್ವ, ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ. ಇದಕ್ಕೆ ಕರ್ನಾಟಕ ರಾಜ್ಯವೇ ಸಾಕ್ಷಿ. ಬಿಜೆಪಿಗೆ ಬಹುಮತ ನೀಡಿ, ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು.

ಬಿಜೆಪಿ ಮಹಾನಗರ ಅಧ್ಯಕ್ಷ, ಶಾಸಕ ಅನಿಲ ಬೆನಕೆ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಗಲಾಟೆಗಳಿಗೆ ಕಡಿವಾಣ ಹಾಕಲಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಕಲ್ಲು ತೂರಾಟದಂತ ಘಟನೆಗಳಿಗೆ ಅಂತ್ಯ ಹಾಡಲಾಗಿದೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ, ಬೆಳಗಾವಿಯಲ್ಲಿ ಶಾಂತಿ ನೆಲೆಸುವುದಕ್ಕೆ ಹಾಗೂ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಸಂಸದೆ ಮಂಗಲ ಅಂಗಡಿ, ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಮುರುೇಂದ್ರಗೌಡ ಪಾಟೀಲ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಬೆಳಗಾಂವಕರ, ಪಾಲಿಕೆ ಉಪಮೇಯರ್ ರೇಷ್ಮಾ ಪಾಟೀಲ ಇತರರಿದ್ದರು.

ಫಡ್ನವೀಸ್‌ಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ: ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಪ್ರಚಾರ ಸಭೆಗೆ ನಗರದ ಟಿಳಕ ಚೌಕಗೆ ಆಗಮಿಸಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ, ದೇಶದ್ರೋಹಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಏಕಾಏಕಿ ಕೊಣವಾಲ್ ಗಲ್ಲಿಯಿಂದ ಆಗಮಿಸಿದ ಎಂಇಎಸ್ ಮುಖಂಡರು, ಕಾರ್ಯಕರ್ತರು ಕಪ್ಪು ಟೀ ಶರ್ಟ್ ಧರಿಸಿ, ಕೈಯಲ್ಲಿ ಕಪ್ಪು ಬಾವುಟ ಹಿಡಿದುಕೊಂಡು ಪ್ರಚಾರ ಸಭೆ ನಡೆಯುವ ಸ್ಥಳಕ್ಕೆ ಬರಲು ಯತ್ನಿಸಿದರು. ಬೆಳಗಾವಿ, ಕಾರವಾರ, ನಿಪಾಣಿ, ಬೀದರ, ಭಾಲ್ಕಿಯಲ್ಲಿ ಮಹಾರಾಷ್ಟ್ರ ಒಂದಾಗಬೇಕು ಎಂಬ ಘೋಷಣೆಗಳನ್ನು ಕೂಗಿದರು. ಭದ್ರತಾ ಪೊಲೀಸರು ಅಲ್ಲಿಂದ ಹೊರಗೆ ಕರೆದೊಯ್ದರು. ಆದರೂ ಬಾಪಟ್ ಗಲ್ಲಿಯ ಮೂಲೆಯಲ್ಲಿ ನಿಂತು ಘೋಷಣೆ ಕೂಗಿದರು.

Latest Posts

ಲೈಫ್‌ಸ್ಟೈಲ್