ಮಡಿಕೇರಿ: ವಿಧಾನಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಕುರಿತು ಉಲ್ಲೇಖಿಸಿರುವುದು ಹಿಂದೂಗಳಿಗೆ ಮಾಡಿದ ಅವಮಾನ ಮತ್ತು ಈ ಪ್ರಸ್ತಾಪ ಖಂಡನೀಯವೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಮಾತೃಶಕ್ತಿ ದುರ್ಗವಾಹಿನಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ದೇಶಭಕ್ತ ಸಂಘಟನೆಯಾಗಿರುವ ಭಜರಂಗದಳ ದೇಶದ ೬೦ ಸಾವಿರ ಗ್ರಾಮಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶಭಕ್ತ ಸಂಘಟನೆಯೊಂದನ್ನು ದೇಶವಿರೋಧಿ ಸಂಘಟನೆಯ ಜೊತೆ ತುಲನೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.
ಶ್ರೀರಾಮ ಮಂದಿರ ಹೋರಾಟದಿಂದ ಹಿಡಿದು ಹಿಂದೂ ಶ್ರದ್ಧಾಕೇಂದ್ರಗಳ ರಕ್ಷಣೆ, ಗೋರಕ್ಷಣೆ, ಲವ್ ಜಿಹಾದ್‌ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ ಮತ್ತು ಆರೈಕೆಯನ್ನು ಭಜರಂಗದಳ ಮಾಡಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕೆ ದೇಶವೇ ತತ್ತರಿಸಿ ತನ್ನವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರೇ ಭಯಪಡುವಂತಹ ಭೀಕರ ಪರಿಸ್ಥಿತಿ ಎದುರಾದಾಗ ಭಜರಂಗದಳದ ಸ್ವಯಂ ಸೇವಕರು ಜೀವದ ಹಂಗು ತೊರೆದು ಶವ ಸಂಸ್ಕಾರ ಮತ್ತು ಸಾಂತ್ವನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಸಮಾಜಮುಖಿ ಕಾರ್ಯ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ಸದಾ ಮುಂದೆ ನಿಂತು ಕಾರ್ಯನಿರ್ವಹಿಸುವ ಹೆಮ್ಮೆಯ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ಮಾಡಿರುವ ಪ್ರಸ್ತಾಪದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಸುರೇಶ್ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.