10 ದಿನಕ್ಕಷ್ಟೇ ಬಜೆ ಡ್ಯಾಂ ನೀರು…!

>>

ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತಿದ್ದು, ಉಡುಪಿ ನಗರಕ್ಕೆ ನೀರುಣಿಸುವ ಜೀವನದಿ ಸ್ವರ್ಣಾ ನದಿಯಲ್ಲಿ ಕಲ್ಲುಬಂಡೆಗಳು ಗೋಚರಿಸುತ್ತಿವೆ. ನಗರಕ್ಕೆ ಇನ್ನು 10 ದಿನವಷ್ಟೇ ಪೂರೈಸಬಹುದಾದಷ್ಟೇ ನೀರಿನ ಪ್ರಮಾಣ ಬಜೆ ಡ್ಯಾಂನಲ್ಲಿದೆ. ನಗರಸಭೆ ಅಧಿಕಾರಿಗಳು ಮಳೆ ನಿರೀಕ್ಷೆಯಲ್ಲಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪುನಃ ರೇಶನಿಂಗ್ ಮಾಡಿ ನೀರು ಪುರೈಕೆ ಮಾಡಲಾಗುತ್ತಿದ್ದು, 3 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಒಂದು ವೇಳೆ, ಪಶ್ಚಿಮಘಟ್ಟ ತಪ್ಪಲು ಪ್ರದೇಶ, ಕಾರ್ಕಳ, ಅಜೆಕಾರು ಭಾಗದಲ್ಲಿ ಮಳೆಯಾಗಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.

ನಗರಕ್ಕೆ ಪ್ರತೀದಿನ 24 ಎಂಎಲ್‌ಡಿ ನೀರಿನ ಅಗತ್ಯವಿದೆ. ನಗರದ ಎತ್ತರ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ನಗರಸಭೆ ಸಾಕಷ್ಟು ಮುಂಜಾಗ್ರತೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಸಿದ್ಧತೆ ನಡೆಸುತ್ತಿದ್ದರೂ, ಅಲ್ಲಲ್ಲಿ ಸಮಸ್ಯೆ ಉಲ್ಬಣವಾಗುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಬೇಸಿಗೆ ತಾಪದಿಂದ ಸ್ವರ್ಣಾ ನದಿ ಬಜೆಯಲ್ಲಿ ನೀರು ಈ ಬಾರಿ ವೇಗವಾಗಿ ಬತ್ತುತ್ತಿದೆ. ನೀರಿನ ಪ್ರಮಾಣ ಡೆಡ್‌ಲೈನ್‌ಗೆ ಸಮೀಪಕ್ಕೆ ಸಾಗುತ್ತಿದೆ. ಬಜೆ ಡ್ಯಾಂನ ಡೆಡ್‌ಲೈನ್ 2 ಮೀಟರ್ ಇದೆ. ಇದೀಗ 2.60 ಮೀಟರ್ ನೀರಿನ ಸಂಗ್ರಹವಿದೆ.

ಇಂದು ಜಿಲ್ಲಾಧಿಕಾರಿ ಸಭೆ: ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಮತ್ತು ಸಮಸ್ಯೆ ನಿವಾರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೋಮವಾರ ವಿಶೇಷ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನೀರಿನ ಸಮಸ್ಯೆ ಸೇರಿದಂತೆ ಮುಂಬರುವ ಮಳೆಗಾಲ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.

Leave a Reply

Your email address will not be published. Required fields are marked *