ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಈ ಆದೇಶ ಹೊರಡಿಸಿದ್ದಾರೆ. 2 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ ಮತ್ತು ಸಾಕ್ಷಿದಾರರಿಗೆ ಬೆದರಿಕೆ, ಸಾಕ್ಷಾೃಧಾರ ನಾಶಮಾಡದಂತೆ ಷರತ್ತು ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.
ನಿಗಮದ 89.62 ಕೋಟಿ ರೂ. ಹಗರಣ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಲೇವಾದೇವಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಇಡಿ ಅಧಿಕಾರಿಗಳು, ಆ.12ರಂದು ಬಿ.ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ನಾಗೇಂದ್ರನನ್ನು ಬಂಧಿಸಿದ್ದರು.
ತನಿಖೆ ಪೂರ್ಣಗೊಳಿಸಿದ ಇಡಿ ಅಧಿಕಾರಿಗಳು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಎ1 ಮಾಜಿ ಸಚಿವ ಬಿ. ನಾಗೇಂದ್ರ ಸೇರಿ 24 ಆರೋಪಿಗಳ ವಿರುದ್ಧ 5114 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಬಿ.ನಾಗೇಂದ್ರ ಅವರ ಆಪ್ತ ವಿಜಯ್ ಕುಮಾರ್‌ಗೌಡ ಮೊಬೈಲ್‌ನಲ್ಲಿ 20.19 ಕೋಟಿ ರೂ. ಅನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವ ದಾಖಲೆ ಪತ್ತೆಯಾಗಿತ್ತು. ಯಾವ ಬೂತ್‌ಗೆ ಎಷ್ಟು ಹಣ ನೀಡಲಾಗಿದೆ ಎಂಬ ಪಟ್ಟಿ ಮಾಡಿರುವುದು ಬೆಳಕಿಗೆ ಬಂದಿತ್ತು.
ಚುನಾವಣೆ ಉಸ್ತುವಾರಿ ವಹಿಸಿದ್ದ ನಾಗೇಂದ್ರ, ನಿಗಮದ ಕೋಟ್ಯಂತರ ರೂ. ಲಪಟಾಯಿಸಲು ಪ್ಲ್ಯಾನ್ ಮಾಡಿದ್ದರು. ಸರ್ಕಾರದ ಖಜಾನೆ-2 ರಿಂದ ಗಂಗಾಕಲ್ಯಾಣ ಯೋಜನೆಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಯನ್ನು ನಿಗಮದ ಎಂ.ಜಿ. ರಸ್ತೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದರು. ಆ ನಂತರ ತೆಲಂಗಾಣದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿ 89.62 ಕೋಟಿ ರೂ. ಲಪಟಾಯಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.