ಅವಳಿ ಕೊಲೆ ಜಾಮೀನು ಅರ್ಜಿ ವಜಾ

ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣ ಬಂಧಿತರ ಪೈಕಿ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ಪದವಿ ವಿದ್ಯಾರ್ಥಿ ಪ್ರಣವ್ ರಾವ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಪವನ್ ಅಮೀನ್‌ನನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಜಾಮೀನು ಅರ್ಜಿ ವಜಾಗೊಳಿಸುವಂತೆ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲಾ ನಾಯಕ್ ಶನಿವಾರ ವಾದ ಮಂಡಿಸಿದ್ದರು. ನ್ಯಾಯಾಧೀಶ ಶ್ರೀಕಾಂತ್ ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿದ್ದರು. ಗಂಭೀರ ಪ್ರಕರಣ ಇದಾಗಿದ್ದು, ತನಿಖೆ ಪೂರ್ಣವಾಗಿಲ್ಲ ಹಾಗೂ ಆಪಾದಿತರು ಪೊಲೀಸ್ ಸಿಬ್ಬಂದಿಯಾಗಿದ್ದು, ಸಾಕ್ಷಿ ನಾಶಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಮತ್ತೊಬ್ಬ ಆರೋಪಿ ಬಂಧನ: ಜೋಡಿಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ, ಬ್ರಹ್ಮಾವರದಲ್ಲಿ ಮಾಂಸದಂಗಡಿ ನಡೆಸುತ್ತಿದ್ದ ಚಾಂತಾರು ಗ್ರಾಮ ನಿವಾಸಿ ಮಹಮ್ಮದ್ ತೌಸಿಫ್(28) ಎಂಬಾತನನ್ನು ಕೋಟ ಪೊಲೀಸರು ಕೊಳಂಬೆ ಎಂಬಲ್ಲಿ ಮಂಗಳವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿದೆ. ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.