ಬಿಎಸ್ಪಿಗೂ ಅಂಬೇಡ್ಕರ್‌ಗೂ ಸಂಬಂಧವಿಲ್ಲ

ತಿ.ನರಸೀಪುರ: ಬಹುಜನ ಸಮಾಜ ಪಕ್ಷಕ್ಕೂ, ಭಾರತ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಹೇಳಿದರು.
ತಾಲೂಕಿನ ಮೂಗೂರು ಗ್ರಾಮದಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ಉಳಿಸುವ ನೆಪದಲ್ಲಿ ಪ್ರತಿಯೊಂದು ಚುನಾವಣೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತಿರುವ ಬಹುಜನ ಸಮಾಜ ಪಕ್ಷಕ್ಕೂ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಸ್ವಾತಂತ್ರೃ ನಂತರ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ರಾಜಕೀಯವಾಗಿಯೂ ಅಂಬೇಡ್ಕರ್ ಅವರು ರಿಪಬ್ಲಿಕನ್ ಪಾರ್ಟಿಯನ್ನು ಸ್ಥಾಪನೆ ಮಾಡಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಅಹಿಂದ ಸಮುದಾಯಗಳ ಅಗತ್ಯವಾಗಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಜನರು ಚಿಂತನೆ ಮಾಡಿ ಆರ್.ಧ್ರುವನಾರಾಯಣ್ ಅವರ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿ, ಐದು ವರ್ಷಗಳ ಹಿಂದೆ ಪೂರ್ಣ ಬಹುಮತ ಪಡೆದು ಬಿಜೆಪಿಯನ್ನು ಅಧಿಕಾರಕ್ಕೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯುವ ಜನರಿಗೆ ಉದ್ಯೋಗವನ್ನು ಕೊಡಲಿಲ್ಲ. ವಿದೇಶದಿಂದ ಕಪ್ಪು ಹಣವನ್ನು ತರಲಿಲ್ಲ. ರಾಮ ಮಂದಿರವನ್ನೂ ನಿರ್ಮಾಣ ಮಾಡಲಿಲ್ಲ. ದೇಶದಲ್ಲಿನ ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುವ ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಸರ್ಜಿಕಲ್ ಸ್ಟ್ರೈಕನ್ನು ರಾಜಕಾರಣಕ್ಕೆ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಮೋಡಿಯ ಮಾತಿಗೆ ಮರುಳಾಗದೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೋರಿದರು. ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಶಾಸಕರಾದ ಡಾ.ಎಸ್.ಯತೀಂದ,್ರ ಸಿ.ಅನಿಲ್, ಮಾಜಿ ಶಾಸಕರಾದ ಎಸ್.ಕೃಷ್ಣಪ್ಪ, ಎಸ್.ಬಾಲರಾಜ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಜಿಪಂ ಸದಸ್ಯ ಮಂಜುನಾಥ್, ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ವರುಣ ಮಹೇಶ್, ಶಿವನಾಗಪ್ಪ, ಆರ್.ನಾರಾಯಣಸ್ವಾಮಿ, ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಹೊನ್ನನಾಯಕ, ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ತಾಪಂ ಸದಸ್ಯ ಎಚ್.ಎನ್.ಉಮೇಶ, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಇತರರು ಹಾಜರಿದ್ದರು.