17.5 C
Bengaluru
Monday, January 20, 2020

ಮಹಾನ್ ತ್ಯಾಗಿಗೆ ಮಜ್ಜನ ನಾಂದಿ

Latest News

ಅಪಘಾತದಿಂದಾದ ಗಾಯದ ನೋವು ತಾಳಲಾರದೇ ಕನಕಪುರ ಮೂಲದ ಯುವಕ ಆತ್ಮಹತ್ಯೆ

ಬೆಂಗಳೂರು: ಅಪಘಾತದಿಂದಾದ ಗಾಯಗೊಂಡಿದ್ದ ಯುವಕನೊಬ್ಬ ನೋವು ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಗೌಡನಪಾಳ್ಯದ ನಿವಾಸಿ ನವೀನ್ (23) ನೇಣು ಬಿಗಿದುಕೊಂಡು...

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ ಸಾಂವಿಧಾನಿಕ ದೃಷ್ಟಿ, ಜಾರಿ ಅಸಾಧ್ಯ ಎನ್ನುವಂತಿಲ್ಲ: ಹರಿಯಾಣ ಮಾಜಿ ಸಿಎಂ ಭೂಪಿಂದರ್​ ಸಿಂಗ್​ ಹೂಡ

ಹರಿಯಾಣ: ಸಂಸತ್​ನಲ್ಲಿ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಇಲ್ಲ ಎನ್ನುವಂತಿಲ್ಲ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಮತ್ತು ಹರಿಯಾಣದ ಮಾಜಿ...

ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸುವ ವೇಳೆ ಬೆಂಕಿ ಹೊತ್ತಿಕೊಂಡಿದ್ದ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ವ್ಯಕ್ತಿ ಸಾವು

ಮಂಡ್ಯ: ಸಂಕ್ರಾಂತಿ ಹಬ್ಬದ ದಿನ ದನಗಳ ಕಿಚ್ಚು ಹಾಯಿಸುವ ವೇಳೆ ನಡೆದಿದ್ದ ಅವಘಡದಲ್ಲಿ ಹಸುಗಳೊಂದಿಗೆ ಕಿಚ್ಚು ಹಾಯಿಸುವಾಗ ಬೆಂಕಿ ತಗುಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮಂಡ್ಯ ತಾಲೂಕಿನ...

ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರಾಂತೀಯ ಹಿಂದು ಅಧಿವೇಶನದ ಸಮಾರೋಪ

ಬೆಂಗಳೂರು:  ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರಾಂತೀಯ ಹಿಂದು ಅಧಿವೇಶನದ ಸಮಾರೋಪ ಸಮಾರಂಭ ನಗರದ ಕಾಮಾಕ್ಷಿಪಾಳ್ಯದಲ್ಲಿ ನಡೆಯಿತು. 150ಕ್ಕೂ ಹೆಚ್ಚು ಹಿಂದು ಸಂಘಟಕರು,...

ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್​ಐಆರ್

ಬೆಂಗಳೂರು: ಸರ್ಕಾರಿ ಕರ್ತವ್ಯಕ್ಕೆ ಗೈರುಹಾಜರಾಗಿ, ಸುದೀರ್ಘ ರಜೆಯ ಬಳಿಕ ಮತ್ತೆ ಕರ್ತವ್ಯಕ್ಕೆ ಮರಳಲು ನಕಲಿ ವೈದ್ಯಕೀಯ ಪ್ರಮಾಣಪತ್ರ ಸೃಷ್ಟಿಸಿದ ಮತ್ತು ಸಲ್ಲಿಸಿದ ಆರೋಪದಡಿ ಬಿಎಂಟಿಸಿಯ 18 ಚಾಲಕರು ಮತ್ತು...

< ಧರ್ಮಸ್ಥಳದಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ * 13 ಬಗೆಯ ದ್ರವ್ಯಗಳಿಂದ ತೋಯ್ದ ವಿರಾಗಿ> 

ವೇಣುವಿನೋದ್ ಕೆ.ಎಸ್. ಧರ್ಮಸ್ಥಳ

ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೂಡಣ ದಿಕ್ಕಿನಲ್ಲಿ ಸೂರ್ಯೋದಯವಾಗಿ ಸೂರ್ಯದೇವ ತನ್ನ ಹದವಾದ ಪ್ರಭೆ ಹರಡುವ ಸಮಯದಲ್ಲಿ ವೀತರಾಗಿ ಬಾಹುಬಲಿಯ ಮಸ್ತಿಷ್ಕದ ಮೇಲೆ ಶುದ್ಧೋದಕದ ಹನಿಗಳು ಪ್ರೋಕ್ಷಣೆಗೊಂಡವು…

ನಂತರ ಸುಮಾರು 5 ಗಂಟೆ ಅವಧಿಯ ಮಹಾಮಸ್ತಕಾಭಿಷೇಕದಲ್ಲಿ ತ್ಯಾಗಮೂರ್ತಿಯ ದೇಹವನ್ನು ಜಲ, ಕ್ಷೀರ, ಶ್ರೀಗಂಧ ಸಹಿತ 13 ವಿಧದ ದ್ರವ್ಯಗಳಿಂದ ತೋಯಿಸಲಾಯಿತು. ನಾಲ್ಕನೇ ಬಾರಿಗೆ ನಡೆಯುತ್ತಿರುವ ಮಹಾಮಸ್ತಕಾಭಿಷೇಕದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಅವರ ಕುಟುಂಬ, ಇತರ ಜೈನ ಸಮುದಾಯದವರಿಂದ 1008 ಕಲಶಗಳಲ್ಲಿ ಬಾಹುಬಲಿಗೆ ಮಹಾಮಜ್ಜನ ನೆರವೇರಿಸಲಾಯಿತು.
ಕ್ರಮವಾಗಿ ಜಲಾಭಿಷೇಕ, ನಾಳೀಕೇರ, ಇಕ್ಷುರಸ (ಕಬ್ಬಿನ ಹಾಲು), ಹಾಲು, ಕಲ್ಕ ಚೂರ್ಣ, ಅರಶಿನ, ಕಷಾಯ, ಚತುಷ್ಕೋಣ ಕಲಶ, ಚಂದನ, ಅಷ್ಟಗಂಧ ಅಭಿಷೇಕ ನಡೆದ ಬಳಿಕ ಪುಷ್ಪವೃಷ್ಟಿ, ಸುವರ್ಣ, ಬೆಳ್ಳಿ ಹಾಗೂ ರತ್ನಗಳ ವೃಷ್ಟಿ ಬಳಿಕ ಪೂರ್ಣಕುಂಭ ಅಭಿಷೇಕದೊಂದಿಗೆ ಮಸ್ತಕಾಭಿಷೇಕ ಮುಕ್ತಾಯಗೊಂಡಿತು.

ಅಪೂರ್ವ ಸನ್ನಿವೇಶ: ಬೆಳಗ್ಗೆ 6.30ಕ್ಕೆ ಚಂದ್ರನಾಥ ಬಸದಿಯಿಂದ 1008 ಕಲಶಗಳ ಅಗ್ರೋದಕ ಮೆರವಣಿಗೆ ನಡೆದು ಮಸ್ತಕಾಭಿಷೇಕದ ಪೂರ್ವವಿಧಿಗಳು ಸಾಂಗವಾಗಿ ನಡೆದವು. ಭಕ್ತರು, ಯಾತ್ರಿಕರು ಸಾಲುಸಾಲಾಗಿ ಬರಲಾರಂಭಿಸುವ ವೇಳೆ ಬೆಳಗ್ಗೆ 8.45ರ ಮೀನ ಲಗ್ನ ಮುಹೂರ್ತದಲ್ಲಿ ಡಾ.ಹೆಗ್ಗಡೆ ಜಲಾಭಿಷೇಕ ಮಂತ್ರ ಸಹಿತವಾಗಿ ಅಭಿಷೇಕ ಪ್ರಾರಂಭಿಸಿದರು. 12 ವರ್ಷಗಳಿಗೊಮ್ಮೆ ಬರುವ ಈ ಅಪೂರ್ವ ಸನ್ನಿವೇಶವನ್ನು ಕಣ್ತುಂಬಿಕೊಂಡ ಭಕ್ತರು ‘ಬೋಲೋ ಬಾಹುಬಲಿ ಭಗವಾನ್ ಕೀ ಜೈ’ ಎಂಬ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು. ಜೈನಮುನಿಗಳು, ಆರ್ಯಿಕಾ ಮಾತೆಯರು ತೆರಳಿ ಬಾಹುಬಲಿಯ ಮೊದಲ ಅಭಿಷೇಕದ ಜಲಮಾಲೆ ಹರಿದುಬರುವುದನ್ನು ಕಣ್ಣಿಗೊತ್ತಿಕೊಂಡರು.

ದೇಹಮೋಹ ಇಲ್ಲದವರಿಗೆ ಸ್ನಾನವಿಲ್ಲ, ದೇಹದ ಮೋಹ ಬಿಟ್ಟ ಬಾಹುಬಲಿಗೂ ಸ್ನಾನದ ಅಗತ್ಯವಿಲ್ಲ, ಆದರೆ ನೋಡುಗರ ಕಣ್ಣಿಗೆ ಈ ಅಭಿಷೇಕ ಪರಿಣಾಮ ಬೀರುತ್ತದೆ, ಬಾಹುಬಲಿಯ ಮೂಲಕವಾಗಿ ಸಮಾಜದಲ್ಲಿ ಅಹಿಂಸೆ, ತ್ಯಾಗದ ಪ್ರಸರಣವಾಗುತ್ತದೆ ಎಂಬುದಕ್ಕಾಗಿ ಈ ವೈಭವದ ಮಹಾಮಜ್ಜನ ನಡೆಯುತ್ತದೆ ಎನ್ನುತ್ತಾರೆ ಜೈನ ವಿದ್ವಾಂಸರು.

ಕಣ್ಣಿಗೆ ಹಬ್ಬವಾದ ಸುವಸ್ತು ಮಜ್ಜನ: ಜಲಾಭಿಷೇಕ ತುಸು ಸುದೀರ್ಘವಾಗಿಯೇ ನಡೆದ ಬಳಿಕ ಅರ್ಘ್ಯ ಬಿಡುವುದರೊಂದಿಗೆ ನಾಳಿಕೇರ(ಎಳನೀರು) ಅಭಿಷೇಕ ಪ್ರಾರಂಭವಾಯಿತು. ಡಾ.ಹೆಗ್ಗಡೆ ಮಾರ್ಗದರ್ಶನದಲ್ಲಿ ಕುಟುಂಬಸ್ಥರು ‘ಎಳನೀರ ಅಭಿಷೇಕ ನಾ ಮಾಡಿದೆ, ಕರುಣಾಳು ನೀ ನನ್ನ ಕಾಪಾಡಿದೆ’ ಎಂಬ ಸುಶ್ರಾವ್ಯ ಹಾಡಿನ ಹಿನ್ನೆಲೆಯಲ್ಲಿ ನಾಳಿಕೇರ ಅಭಿಷೇಕ ಕೈಗೊಂಡರು. ಆ ವೇಳೆಗಾಗಲೇ ಬಿಸಿಲಿನ ಝಳ ರತ್ನಗಿರಿಯಲ್ಲಿ ತೀಕ್ಷ್ಣಗೊಳ್ಳುತ್ತಿದ್ದುದರಿಂದ ಶಿರಕ್ಕೆ ಎರೆದ ಜಲ ಸೊಂಟಕ್ಕೆ ತಲುಪುವ ಮೊದಲು ಮುಖ ಒಣಗುತ್ತಿತ್ತು. ಬಿಸಿಲಿನ ಝಳವನ್ನು ತಗ್ಗಿಸಲೋ ಎಂಬಂತೆ ಮುಂದೆ ಇಕ್ಷುರಸ(ಕಬ್ಬಿನ ಹಾಲು)ದ ಸರದಿ. ಗಾಣಕ್ಕೆ ಸಿಕ್ಕಿದ ಕಬ್ಬು ತನ್ನ ರಸವನ್ನು ಕಳೆದುಕೊಂಡ ರೀತಿಯಲ್ಲಿ ನಾವೆಲ್ಲ ನಮ್ಮ ಕರ್ಮ ಫಲವನ್ನು ಅರೆದು ಸಜ್ಜನರಾಗಬೇಕು ಎಂಬ ಸಂದೇಶವನ್ನು ತಲುಪಿಸುವ ರೀತಿಯಲ್ಲಿ ಇಕ್ಷುರಸದ ಜಳಕ ಗೊಮ್ಮಟೇಶನ ದೇಹಕಮಲವನ್ನು ತೋಯಿಸಿತು.
ಮಧ್ಯಾಹ್ನ 1.15ರ ವೇಳೆ ಭಕ್ತರು ಕುತೂಹಲದಲ್ಲಿ ಕಾಯುತ್ತಿದ್ದ ಅಭಿಷೇಕ. ಕ್ಷೀರಾಭಿಷೇಕದ ಮೊದಲ ಕಲಶಧಾರೆ ಬಾಹುಬಲಿಯ ಶಿರವನ್ನು ಶ್ವೇತವರ್ಣಕ್ಕೆ ಬದಲಾಯಿಸುವಂತೆಯೇ ಹರ್ಷೋದ್ಗಾರದ ಅನುರಣನ!
ಗಂಧಸಾಲೆ ಅಕ್ಕಿಯ ಪುಡಿ, ಏಲಕ್ಕಿ, ಕರ್ಪೂರವೇ ಮೊದಲಾದ ಸುಗಂಧಕಾರಕ ಪುಡಿಗಳನ್ನೊಳಗೊಂಡ ಕಲ್ಕಚೂರ್ಣವನ್ನು ಗೊಮ್ಮಟನ ಮೇಲೆ ಚಿಮುಕಿಸಿದಾಗ ಅದೇನು ಹಿಮಪಾತವೇ ಎಂಬಂತೆ ಭಾಸವಾಯಿತು. ಬಾಹುಬಲಿಯ ತಲೆಗೂದಲ 64 ಸುಳಿಗಳು, ಹರವಾದ ಎದೆಯ ಮೇಲೆ ಶ್ವೇತವರ್ಣದ ಚೂರ್ಣ ನಿಂತಾಗ ಇಲ್ಲಿರುವುದು ಬಾಹುಬಲಿಯ ಮೂರ್ತಿಯೇ ಅಥವಾ 3ಡಿ ಚಿತ್ರವೇ ಎನ್ನುವ ಭಾವನೆ ಸೇರಿದವರಲ್ಲಿ! ಅದುವರೆಗೆ ಗೋಚರಿಸದ ಕಣ್ಣಿನ ಗುಡ್ಡೆಗಳೂ ಸ್ಪಷ್ಟ!.

ಕೇಸರಿಯಾ ಕೇಸರಿಯಾ ಆಜ್ ಹಮಾರೆ ರಂಗ್ ಕೇಸರಿಯಾ ಗೀತೆ ಮೊಳಗುತ್ತಿದ್ದಂತೆಯೇ ಅರಶಿನಧಾರೆ ಗೊಮ್ಮಟನ ಮೇಲೆ! ವಿಷನಾಶಕ ಅರಶಿನ ನಮ್ಮ ಮನದ ವಿಷವನ್ನೂ ಪರಿಹರಿಸಲಿ ಎಂಬ ಸಂದೇಶ ನೀಡಿತು.
ದೇಹದ ನಾಲ್ಕು ಕಷಾಯಗಳಾದ ಕ್ರೋಧ, ಮಾನ, ಮಾಯ ಹಾಗೂ ಲೋಭಗಳನ್ನು ದೂರವಾಗಿಸುವಂತಹ ಸಂದೇಶವನ್ನು ಪಸರಿಸಲು ಕಷಾಯದ ಅಭಿಷೇಕ ಮಾಡಲಾಯಿತು. ಅಶ್ವತ್ಥ, ಗೋಳಿಯಂತಹ ಔದುಂಬರ ವೃಕ್ಷಗಳ ತೊಗಟೆಯನ್ನು ಒಣಗಿಸಿ ಕುದಿಸಿ ಮಾಡುವ ಕಷಾಯವನ್ನು ಸ್ವಾಮಿಯ ಮಸ್ತಕಕ್ಕೆ ಪ್ರೋಕ್ಷಿಸಲಾಯಿತು.

ಬಾಹುಬಲಿಯ ಮುಂಭಾಗ ನಾಲ್ಕುದಿಕ್ಕುಗಳಲ್ಲಿ ಇರಿಸಿದ ಚತುಷ್ಕೋನ ಕಲಶಗಳ ಜಲದಿಂದ ಸ್ನಾನ ಮುಗಿಸಿ, ಬಳಿಕ ನಡೆದದ್ದು ಅತ್ಯಾಕರ್ಷಕ ಗಂಧಗಳ ಅಭಿಷೇಕ. ಮೊದಲು ಜೈನ ಶ್ರಾವಕರೇ ತೇಯ್ದ ಶ್ರೀಗಂಧವನ್ನು ಎರೆದಾಗ ಜೇಡಿಮಣ್ಣಿನ ವರ್ಣಕ್ಕೆ ತಿರುಗಿದ ವೈರಾಗ್ಯಮೂರ್ತಿ, ಚಂದನದಲ್ಲಿ ಕೆಂಪುಬಣ್ಣದಲ್ಲಿ ಗೋಚರಿಸಿತು. ಚಾಮರಾಜನಗರದ ಕಾಡಿನ ವನಸ್ಪತಿಗಳಿಂದ ಸಂಗ್ರಹಿಸಿದ ಸಾವಯವ ವಸ್ತುಗಳಿಂದ ತಯಾರಾದ ಅಷ್ಟಗಂಧ ಅಭಿಷೇಕ ಹೊಯ್ಯುತ್ತಿರುವಂತೆಯೇ ರಕ್ತಕೆಂಪು ಬಣ್ಣದಲ್ಲಿ ಕಂಗೊಳಿಸಿದ. ಜತೆಗೆ ಇಡೀ ವಾತಾವರಣದಲ್ಲೇ ಅಷ್ಟಗಂಧ ಕಂಪು ನಾಸಿಕವನ್ನೂ ಆವರಿಸಿಕೊಂಡಿತು.

ಸ್ವರ್ಣ, ರಜತ, ಮುತ್ತು, ರತ್ನಗಳನ್ನೊಂಡ, ವಿವಿಧ ಹೂಗಳನ್ನು ಮಿಶ್ರಣಗೊಳಿಸಿದ ಕನಕಾಭಿಷೇಕ ಸುರಿದಂತೆಯೇ ಬಾಹುಬಲಿಯ ಶಿರಾಗ್ರದಲ್ಲಿ ಬಿದ್ದ ಹೂಗಳು ಅಪೂರ್ವ ದೃಶ್ಯವನ್ನೊದಗಿಸಿದವು!
ಕೊನೆಯಲ್ಲಿ ಬೃಹತ್ ಹಾರವನ್ನು ಬಾಹುಬಲಿಗೆ ತೊಡಿಸಿ, ಮಂಗಳಾರತಿಯನ್ನು ಕಾಲಿಂದ ತೊಡಗಿ ಮುಖದವರೆಗೂ ಬೆಳಗಲಾಯಿತು.

ಎಷ್ಟು ದ್ರವ್ಯ?: ಶನಿವಾರ ಮಸ್ತಕಾಭಿಷೇಕಕ್ಕೆ 200 ಲೀಟರ್ ಕಬ್ಬಿನ ಹಾಲು, 600 ಲೀಟರ್ ಹಾಲು, 75 ಕೆ.ಜಿ. ಕಲ್ಕ ಚೂರ್ಣ, 100 ಕೆ.ಜಿ. ಅರಿಶಿನ, 75 ಕೆ.ಜಿ. ಚಂದನ ಮತ್ತು 75 ಕೆ.ಜಿ. ಅಷ್ಟಗಂಧ ಬಳಸಲಾಯಿತು.

ಶಾಂತಿ ಸಂದೇಶ ಸಾರಿದ ಕಾಶ್ಮೀರದ ಕೇಸರಿ ಕಲಶ: ಕಾಶ್ಮೀರದಿಂದ ಸಂಗ್ರಹಿಸಿ ತರಲಾದ ಕೇಸರಿಯ ವಿಶೇಷವಾದ ಕಲಶಾಭಿಷೇಕವೂ ನಡೆದದ್ದು ಮೊದಲ ದಿನದ ಮಜ್ಜನದ ವಿಶೇಷ. ಕಾಶ್ಮೀರದಲ್ಲಿ ಹಿಂಸೆ ಮಡುಗಟ್ಟಿರುವಾಗ ಅಲ್ಲಿಯೇ ಬೆಳೆಯುವ ಕೇಸರಿಯನ್ನು ತುಮಕೂರಿನ ಶ್ರೇಯಾಂಸ್ ಕುಮಾರ್ ಅವರು ಸಂಗ್ರಹಿಸಿ ತಂದಿರುವುದನ್ನು ಅಭಿಷೇಕ ಮಾಡಲಾಯಿತು. ಈ ಅಭಿಷೇಕ ದೇಶದಲ್ಲೇ ಶಾಂತಿ ನೆಲೆಸುವಂತೆ ಮಾಡಲಿ ಎಂದು ಈ ವೇಳೆ ಡಾ.ವೀರೇಂದ್ರ ಹೆಗ್ಗಡೆ ಹಾರೈಸಿದರು.

ಗೊಮ್ಮಟನ ಶಿರಸ್ಸಿಗೆ ಲಂಡನ್ ಥೇಮ್ಸ್ ನದಿಯ ನೀರು!: ರತ್ನಗಿರಿಯಲ್ಲಿ ವಿರಾಜಮಾನನಾದ ಗೊಮ್ಮಟನ ಶಿರಸ್ಸಿಗೆ ಲಂಡನ್ ಥೇಮ್ಸ್ ನದಿಯ ವಿಶೇಷ ಜಲವನ್ನು ಅಭಿಷೇಕ ಮಾಡಲಾಯಿತು. ಮಸ್ತಕಾಭಿಷೇಕಕ್ಕೂ ದೂರದ ಲಂಡನ್‌ನ ಥೇಮ್ಸ್ ನದಿಗೂ ಎತ್ತಣದ ಸಂಬಂಧ ಎಂದು ಅಚ್ಚರಿಪಡದಿರಿ.

ಮೂಲತಃ ಕುಣಿಗಲ್‌ನ, ಪ್ರಸ್ತುತ ಲಂಡನ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ನವೀನ್ ಸಂಕಿಘಟ್ಟ ಅವರು ಥೇಮ್ಸ್ ನದಿಯಿಂದ 1 ಲೀಟರ್ ನೀರು ತಂದಿದ್ದು, ಶನಿವಾರ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು. ಬಳಿಕ ಆ ನೀರನ್ನು ಜೈನಶಾಸ್ತ್ರದ ವಿಧಿಯಲ್ಲಿ ಪವಿತ್ರಗೊಳಿಸಿ ಅಭಿಷೇಕದಲ್ಲಿ ಬಳಸಿಕೊಳ್ಳಲಾಯಿತು. ಧರ್ಮಸ್ಥಳದ ಮಸ್ತಕಾಭಿಷೇಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದೇಶದ ಜಲ ಬಳಸಲಾಗಿದೆ, ಇದರ ಮೊದಲು ಇತ್ತೀಚೆಗಷ್ಟೆ ನಡೆದ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೂ ಥೇಮ್ಸ್ ನದಿಯ ನೀರನ್ನು ತಂದಿದ್ದೆ, ಅದು ಕೇವಲ ಥೇಮ್ಸ್ ನದಿಯಲ್ಲ, ಅಲ್ಲಿನ ಸಮಸ್ತ ಜೈನ ಬಂಧುಗಳ ಭಕ್ತಿಭಾವದ ಸಂಕೇತ ಎಂದು ನವೀನ್ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

ಡಾ.ಹೆಗ್ಗಡೆಯವರಿಗೆ ಸದ್ಧರ್ಮ ಪರಿಪಾಲಕರುಂ ಬಿರುದು: 13 ಜೈನ ಮಠಗಳ ಪರವಾಗಿ ಶ್ರವಣಬೆಳಗೊಳ ಸ್ವಾಮೀಜಿಯವರಿಂದ ಪ್ರದಾನ ಬಾಹುಬಲಿಯ ನಾಲ್ಕನೇ ಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಭಟ್ಟಾರಕರ ಪರವಾಗಿ ‘ಸದ್ಧರ್ಮ ಪರಿಪಾಲಕರುಂ’ ಬಿರುದು ನೀಡಿ ಗೌರವಿಸಲಾಯಿತು. ಮೊದಲ ದಿನದ ಮಹಾಮಜ್ಜನ ಮುಗಿದ ಬಳಿಕ ಸಮಸ್ತ 13 ಜೈನ ಮಠಗಳ ಪರವಾಗಿ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಿರುದು ಪ್ರದಾನಿಸಿದರು.

21ನೇ ಶತಮಾನದಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ಕೀರ್ತಿ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ‘ತಮ್ಮ ಆಡಳಿತ ಅವಧಿಯಲ್ಲಿ ಶ್ರೀ ಕ್ಷೇತ್ರದಲ್ಲಿ ಅನ್ನ, ವಿದ್ಯೆ, ಆಶ್ರಯ, ವೈದ್ಯಕೀಯ ಮುಂತಾದ ಪರೋಪಕಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಕಾರ್ಯದಲ್ಲಿ ಆದರ್ಶರಾಗಿದ್ದೀರಿ, ಧರ್ಮಸ್ಥಳದಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ, ವೈದ್ಯಕೀಯ ಕಾರ್ಯಗಳ ಪರಿಯನ್ನು ನೋಡಿ ಮನುಕುಲವೇ ಅಚ್ಚರಿಪಡುತ್ತದೆ. ಸದಾ ಹಸನ್ಮುಖಿಗಳಾಗಿ ಸಾಧು ಸಂತರ ಮಧ್ಯೆ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದೀರಿ’ ಎಂದು ಬಿರುದಿನ ಸ್ವಸ್ತಿ ಮಂಗಲ ಪತ್ರದಲ್ಲಿ ಜಿನಾಚಾರ್ಯರು ಶ್ಲಾಘಿಸಿದ್ದಾರೆ.
ಇತರ ಜೈನ ಪಟ್ಟಾಚಾರ್ಯರಾದ ಕಾರ್ಕಳದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ಶ್ರೀ ಡಾ.ಲಕ್ಷ್ಮೀಸೇನ ಭಟ್ಟಾರಕರು, ಅರಿಹಂತಗಿರಿಯ ಶ್ರೀಧವಲಕೀರ್ತಿ ಭಟ್ಟಾರಕರು, ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕರು, ಕಂಬದಹಳ್ಳಿಯ ಶ್ರೀ ಭಾನುಕೀರ್ತಿ ಭಟ್ಟಾರಕರು, ಜಿನಕಂಚಿಯ ಶ್ರೀ ಲಕ್ಷ್ಮೀಸೇನ ಭಟ್ಟಾರಕರು, ಹೊಂಬುಜದ ಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾ ಶ್ರೀ ಭಟ್ಟಾಕಲಂಕ ಭಟ್ಟಾರಕರು, ನರಸಿಂಹರಾಜಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕರು, ವರೂರಿನ ಶ್ರೀ ಧರ್ಮಸೇನ ಭಟ್ಟಾರಕರು, ನಾಂದಣಿಯ ಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

ಕಲಶ ಏಲಂ ಇಲ್ಲ: ಇತರ ಮಸ್ತಕಾಭಿಷೇಕದಲ್ಲಿ ಈ ಅಪರೂಪದ ಅವಕಾಶ ಪಡೆಯಲು ಒತ್ತಡ ಹೆಚ್ಚುತ್ತದೆ ಎಂಬ ಕಾರಣಕ್ಕಾಗಿ ಕಲಶಗಳನ್ನು ಏಲಂ ಮಾಡಲಾಗುತ್ತದೆ. ಆದರೆ ಧರ್ಮಸ್ಥಳ ಮಸ್ತಕಾಭಿಷೇಕದಲ್ಲಿ ಇದರ ಬದಲು ಮೊದಲು ಬಂದವರಿಗೆ ಅವಕಾಶ. ಜನಮಂಗಲ ಕಲಶದಲ್ಲಿ ಕೇವಲ 1001 ರೂ. ಕೊಟ್ಟರೆ ಮೂರು ಮಂದಿ ಹೋಗಿ ಕಲಶಾಭಿಷೇಕ ಮಾಡಲು ಅವಕಾಶ ಕೊಡಲಾಗುತ್ತದೆ. ಜನಮಂಗಲ ಕಲಶವಲ್ಲದೆ ದಿವ್ಯಕಲಶ ಹಾಗೂ ಶ್ರದ್ಧಾಕಲಶ ಹೀಗೆ ಮೂರು ವಿಧದ ಕಲಶಗಳಲ್ಲಿ ಕಲಶಾಭಿಷೇಕಕ್ಕೆ ಮೊದಲೇ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಬುಕಿಂಗ್ ಕೂಡಾ ಮುಗಿದಿದೆ.

ಅಚ್ಚುಕಟ್ಟು ವ್ಯವಸ್ಥೆ: ಮಸ್ತಕಾಭಿಷೇಕದ ಮೊದಲ ದಿನವೇ ಭಾರಿ ಜನಸಂದಣಿ ಕಂಡುಬಂತು, ಆದರೆ ಸುವ್ಯವಸ್ಥಿತವಾದ ಸೌಲಭ್ಯಗಳಿಂದಾಗಿ ಯಾವುದೇ ಸಮಸ್ಯೆ ಇಲ್ಲದೆ ಅಚ್ಚುಕಟ್ಟಾಗಿ ಮೊದಲ ದಿನದ ಮಹಾಮಸ್ತಕಾಭಿಷೇಕ ನಡೆಯಿತು. ಮಸ್ತಕಾಭಿಷೇಕ ಮಾಡುವವರಿಗೆ 62 ಅಡಿ ಎತ್ತರದ ಅಟ್ಟಳಿಗೆ, ಕುಳಿತುಕೊಂಡು ವೀಕ್ಷಿಸಲು 6000 ಮಂದಿ ಸಾಮರ್ಥ್ಯದ ವೀಕ್ಷಣಾ ಗ್ಯಾಲರಿ, ಬಿಸಿಲಿನ ಝಳ ತಣಿಸಲು ಗ್ರೀನ್‌ಶೇಡ್ ವ್ಯವಸ್ಥೆ ಮಾಡಲಾಯಿತು.

ಮನತಣಿಸಿದ ಸಂಗೀತ: ಬಾಹುಬಲಿಯ ಮಸ್ತಕಾಭಿಷೇಕವನ್ನು ಮತ್ತಷ್ಟು ರೋಚಕಗೊಳಿಸಿದ್ದು ಸಂಗೀತ ಕಾರ್ಯಕ್ರಮ. ಕೊಚ್ಚಿಕಾರ್ ದೇವದಾಸ್ ಪೈ ಅವರು ತಮ್ಮ ತಂಡದೊಂದಿಗೆ ಅಚ್ಚುಕಟ್ಟಾಗಿ ಸಿತಾರ್ ವಾದನ ಮೂಲಕ ಮನರಂಜಿಸಿದರೆ ಕುಬೇರ್ ಚೌಗುಲೆ ಮತ್ತು ತಂಡದವರು ವಿಶೇಷ ಬಾಹುಬಲಿ ಭಕ್ತಿಗೀತೆ ಗಾಯನ ನಡೆಸಿಕೊಟ್ಟರು.

ಚಾರುಕೀರ್ತಿ ಆಶೀರ್ವಚನ: ಬಾಹುಬಲಿಯ ಜೀವನ ಗಾಥೆ ತೀರ್ಥಂಕರರಿಗಿಂತಲೂ ಮಿಗಿಲಾದದ್ದು. ನಿರಾಹಾರಿಯಾಗಿ ನಿರ್ಜನ ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ತಪಸ್ಸು ಮಾಡಿದಾಗ ಹುತ್ತಗಳು, ಹಾವುಗಳು, ಬಳ್ಳಿಗಳು ಆವರಿಸಿದರೂ ಅಲುಗಾಡಲಿಲ್ಲ. ಪ್ರಪಂಚದ ಯಾವ ರಾಷ್ಟ್ರದಲ್ಲೂ, ಧರ್ಮಗಳಲ್ಲೂ ಬಾಹುಬಲಿಯಂತಹ ತಪಸ್ವಿ ಸಿಗಲು ಸಾಧ್ಯವಿಲ್ಲ. ಬಾಹುಬಲಿಯ ತ್ಯಾಗ ತಪಸ್ಸು ಜಗತ್ತಿನಲ್ಲಿ ಅನುಪಮ ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನುಡಿದರು.
ಮಹಾಮಸ್ತಕಾಭಿಷೇಕ ಸಂದರ್ಭ ಮಾತನಾಡಿದ ಅವರು, ಧರ್ಮಸ್ಥಳದ ಹೆಗ್ಗಡೆಯವರು ಬಾಹುಬಲಿಯನ್ನು ಇಲ್ಲಿ ಪ್ರತಿಷ್ಠಾಪಿಸಿ ಆಧುನಿಕ ಇತಿಹಾಸದಲ್ಲಿ ಯಾರೂ ಮಾಡದಂತಹ ಸಾಹಸ ಮಾಡಿದ್ದಾರೆ. ಕಾರ್ಕಳದಿಂದ ಇಲ್ಲಿಗೆ ತರುವ, ನಿಲ್ಲಿಸುವ, ಪ್ರತಿಷ್ಠಾಪಿಸುವ ಕಾರ್ಯ ನೋಡಿದವರು ಪುಣ್ಯವಂತರು. ಚಾವುಂಡರಾಯ ಬಾಹುಬಲಿಗೆ ಕಲಾನ್ಯಾಯ ಒದಗಿಸಿದರೆ ಪಂಪಕವಿ ಸಾಹಿತ್ಯ ನ್ಯಾಯ ಕೊಟ್ಟ, ಈಗ ಧರ್ಮಸ್ಥಳದಲ್ಲಿ 3000 ಕಲಾವಿದರ ಮೂಲಕ ಪಂಚಮಹಾವೈಭವ ನಡೆಸುವ ಮೂಲಕ ಸಾಂಸ್ಕೃತಿಕ ನ್ಯಾಯವನ್ನು ಹೆಗ್ಗಡೆ ಒದಗಿಸಿದ್ದಾರೆ, ಇದನ್ನು ನೋಡದವರು ಭಾಗ್ಯವಂತರಲ್ಲ ಎಂದರು.

ಇದೊಂದು ಸೌಭಾಗ್ಯ ಡಾ.ಹೆಗ್ಗಡೆ ಅಭಿಮತ: 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನೆರವೇರುತ್ತದೆ. ಬೃಹತ್ ಮೂರ್ತಿಗೆ ಸಣ್ಣ ಕಲಶದಿಂದ ಅಭಿಷೇಕ ನಡೆಸುವುದು ದೊಡ್ಡ ಸಂಗತಿಯಾಗಿದೆ. ಕಲಶಾಭಿಷೇಕ ನೆರವೇರಿಸುವಾಗ ಆಗುವ ಸಂತೋಷ, ಪುಣ್ಯಕ್ಷಣ ಬೇರೆಲ್ಲೂ ಕಾಣಸಲು ಸಿಗದು…

ಮೊದಲ ದಿನ ಮಸ್ತಕಾಭಿಷೇಕಕ್ಕೆ ಚಾಲನೆ ಕೊಟ್ಟ ಧರ್ಮಸ್ಥಳ ಧರ್ಮಾಧಿಕಾರಿ, ಮಸ್ತಕಾಭಿಷೇಕ ರೂವಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತವಿದು.

ನಿರಂತರವಾಗಿ ನಾಲ್ಕು ಬಾರಿ ಪ್ರತಿಷ್ಠಾಪಕನಾಗಿ ಬಾಹುಬಲಿಗೆ ಅಭಿಷೇಕ ಮಾಡುವ ಅವಕಾಶ ಒದಗಿ ಬಂದಿರುವುದು ನನ್ನ ಪಾಲಿನ ಸೌಭಾಗ್ಯ. ಮಹಾಮಸ್ತಕಾಭಿಷೇಕ ಎನ್ನುವುದು ಆನಂದ ತರುವ ಸಂದರ್ಭ. ಬಾಹುಬಲಿ ಮೂರ್ತಿಗೆ ನಿತ್ಯವೂ ಮಸ್ತಕಾಭಿಷೇಕ ನಡೆಸಬೇಕು. ಆದರೆ ಅದು ಸುಲಭ ಸಾಧ್ಯವಲ್ಲದ ಸಂಗತಿಯಾದ್ದರಿಂದ ಪಾದಾಭಿಷೇಕ ನಡೆಸಲಾಗುತ್ತದೆ.

ಹಿಂದೆ ನಾನು ಬಾಹುಬಲಿ ಪ್ರತಿಷ್ಠಾಪನೆ ಮಾಡಿದಾಗ ಸಣ್ಣವನಿದ್ದೆ. ನನ್ನ ತಾಯಿಯ ಆಶಯದಂತೆ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ನಿರಂತರ ನಾಲ್ಕು ಬಾರಿ ಮಹಾಮಸ್ತಕಾಭಿಷೇಕ ನಡೆಸಿರುವುದು ನನಗೆ ಪುಣ್ಯ ಲಾಭವಾದಂತೆ. ಇಂತಹ ಅಪೂರ್ವ ಅವಕಾಶ ನನ್ನ ಪಾಲಿಗೆ ಬಂದಿರುವುದು ಸೌಭಾಗ್ಯ ಎಂದರು.

ಪಿಂಛಿಧಾರಿಗಳ ಸಂಖ್ಯೆ ನೂರಕ್ಕೇರಿಕೆ: ಈ ಬಾರಿಯ ಧರ್ಮಸ್ಥಳ ಮಹಾಮಸ್ತಕಾಭಿಷೇಕ ವೇಳೆಗೆ ಜೈನ ಮುನಿಗಳಲ್ಲಿ ಪಿಂಛಿಧಾರಿಗಳ ಸಂಖ್ಯೆ ನೂರಕ್ಕೆ ಏರಿಕೆಯಾಗಿದೆ ಎಂದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. 1982ರಲ್ಲಿ ಈ ಸಂಖ್ಯೆ 10 ಇತ್ತು, ನಂತರದ ಮಸ್ತಕಾಭಿಷೇಕಕ್ಕೆ ಇವರ ಸಂಖ್ಯೆ 20, ಮೂರನೇ ಮಸ್ತಕಾಭಿಷೇಕ ವೇಳೆ 40ಕ್ಕೆ ತಲುಪಿತ್ತು. ಈ ಬಾರಿ ನೂರು ಮಂದಿ ಪಿಂಛಿಧಾರಿಗಳಿದ್ದಾರೆ. ಇದು ಮಸ್ತಕಾಭಿಷೇಕದ ಪ್ರಭಾವದ ದ್ಯೋತಕ ಎಂದರು.

ಇಂದಿನ ಕಾರ್ಯಕ್ರಮ: ಫೆ.17, 18ರಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪರಿವಾರ ಹಾಗೂ ಈಗಾಗಲೇ ಕೂಪನ್ ಪಡೆದುಕೊಂಡವರಿಂದ ಮಸ್ತಕಾಭಿಷೇಕ ನಡೆಯಲಿದೆ. ಭಾನುವಾರ ಬೆಳಗ್ಗೆ 8ರಿಂದ ನಿತ್ಯವಿಧಿಸಹಿತ ಅಗ್ರೋದಕ ಮೆರವಣಿಗೆ, ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ, ಸಾಯಂಕಾಲ ಧ್ವಜಪೂಜೆ, ಶ್ರೀಬಲಿವಿಧಾನ, ಮಹಾಮಂಗಳಾರತಿ ನಡೆಯಲಿದೆ. ಸಾಯಂಕಾಲ 7ರಿಂದ ಶಂಕರ್ ಮಹದೇವನ್, ಸಿದ್ದಾರ್ಥ್ ಮಹಾದೇವನ್ ಶಿವಂ ಮಹಾದೇವನ್ ಮತ್ತು ತಂಡದವರಿಂದ ಗಾನನಿನಾದ, ಅಂತಾರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್ ಅವರಿಂದ ಚಿತ್ರ ಚಮತ್ಕಾರ ನಡೆಯಲಿದೆ.

  •  ನಾಡೋಜ ಹಂಪನಾಗರಾಜಯ್ಯ, ಕಮಲಾ ಹಂಪನಾ, ಡಾ. ಬಿ.ಪಿ. ಸಂಪತ್ ಕುಮಾರ್ ಮಸ್ತಕಾಭಿಷೇಕದ ವೀಕ್ಷಕ ವಿವರಣೆ ನೀಡಿದರು.
  • ಜಿನಭಕ್ತಿಗೀತೆಗಳ ಗಾಯನ, ಬಾಹುಬಲಿ ಬಗ್ಗೆ ಭಕ್ತಿಗೀತೆಗಳನ್ನು ಶ್ರಾವಕ-ಶ್ರಾವಕಿಯರು ಹಾಡಿ, ಆನಂದದಿಂದ ನರ್ತಿಸಿದರು.
  • ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಮಹಾಮಸ್ತಕಾಭಿಷೇಕಕ್ಕಾಗಿ ವಿಶೇಷವಾಗಿ 5000 ಲೀಟರ್ ಜೀರಾಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಬಾಹುಬಲಿ ಮೂರ್ತಿಗೆ ಮಹಾಮಜ್ಜನಕ್ಕೆ ವಿಶೇಷ ಅಟ್ಟಳಿಗೆಯನ್ನು ನಿರ್ಮಿಸಲಾಗಿದೆ. ಇಂತಹ ಅಟ್ಟಳಿಗೆ ಬೇರೆ ಎಲ್ಲಿಯೂ ಇಲ್ಲ. ಇದಕ್ಕಾಗಿ ವಿಶೇಷ ಯೋಚನೆ ಹಾಗೂ ಯೋಜನೆಯನ್ನು ಮಾಡಲಾಗಿದೆ. ಇದೇ ರೀತಿ ಆದಿನಾಥ ವಂಶದ ಕಥಾನಕವನ್ನು ಪಂಚಮಹಾವೈಭವದಲ್ಲಿ ಕಾಣಿಸಲಾಗಿದೆ. ಇದು ಕೂಡ ತೃಪ್ತಿ ತಂದಿದೆ. ಇನ್ನಷ್ಟು ಅಭ್ಯಾಸ ಮಾಡಿದ್ದರೆ, ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು.
– ಹೇಮಾವತಿ ವಿ. ಹೆಗ್ಗಡೆ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...