ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದೇಶದ ಆಸ್ತಿ ಮಾಡಿ

ಬಾಗಲಕೋಟೆ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಹೊಣೆಗಾರಿಕೆ ತಾಯಂದಿರ ಮೇಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ತಾಲೂಕಿನ ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳ ಜನ್ಮ ಶತಮಾನೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು. ಆ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಬೇಕು ಎಂದರು.

ಪ್ರತಿಯೊಬ್ಬರೂ ಆಧ್ಯಾತ್ಮಿಕ ಪ್ರಜ್ಞೆ ಹೊಂದಿರಬೇಕು. ಧಾರ್ಮಿಕ ಕಾರ್ಯಾಕ್ರಮಗಳಲ್ಲಿ ಪಾಲ್ಗೊಂಡು ಪುರಾಣ, ಪ್ರವಚನ ಆಲಿಸಬೇಕು. ಅಂದಾಗ ನಮ್ಮಲ್ಲಿ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ. ಜೀವನದಲ್ಲಿ ಮುಕ್ತಿ ಪಡೆಯಬೇಕಾದರೆ ಗುರುವಿಗೆ ಶರಣಾಗಬೇಕು ಎಂದು ಹೇಳಿದರು.

ಸಾಹಿತಿ ಇಂದುಮತಿ ಸಾಲಿಮಠ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿ, ಕೌಟುಂಬಿಕ ವ್ಯವಸ್ಥೆ ಸೇರಿ ಪ್ರತಿ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಆ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಮಹಿಳೆ ಪಡೆದಿದ್ದಾಳೆ ಎಂದರು.

ಹಾಡು ಮತ್ತು ಹಾಸ್ಯ ಚಟಾಕೆಗಳ ಮೂಲಕ ಮಹಿಳೆಯರಿಗೆ ತಮ್ಮ ಜವಾಬ್ದಾರಿ ತಿಳಿಸಿದ ಸಾಲಿಮಠ, ಧಾರಾವಾಹಿಗಳ ದಾಸರಾಗದೆ ಉಪಯುಕ್ತ ಕಾರ್ಯಕ್ರಮಗಳನ್ನು ಮಾತ್ರ ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಿಲ್‌ಕೆರೂರ ಮಠದ ಪರಂಪರೆ ಮತ್ತು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಶ್ರೀಮಠ ಅಪಾರ ಕೊಡುಗೆ ನೀಡಿದೆ. ಲಿಂ.ರುದ್ರಮುನಿ ಶಿವಯೋಗಿಗಳು ಮೌನ ತಪಸ್ವಿಗಳಾಗಿ ಲೋಕ ಕಲ್ಯಾಣ ಕಾರ್ಯ ಮಾಡುವ ಮೂಲಕ ಅಪಾರ ಸಂಖ್ಯೆಯ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.

ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುಳೇದಗುಡ್ಡದ ಕಾಡಸಿದ್ದೇಶ್ವರ ಶಿವಾಚಾರ್ಯರು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು, ಡಾ.ಮಾಲಿನಿ ಪಾಟೀಲ, ಕಮಲಾ ಕುಂಬಾರ, ಜಿಪಂ ಸದಸ್ಯೆ ಕವಿತಾ ದಡ್ಡಿ, ಲತಾ ಗೂಳಿ, ಶಿವಮ್ಮ ಮೇಟಿ, ಅನ್ನಪೂರ್ಣ ದೊಡ್ಡನಗೌಡ್ರ ಉಪಸ್ಥಿತರಿದ್ದರು.

ಸಮಾವೇಶಕ್ಕೂ ಮುನ್ನ ನಡೆದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಡಾ.ಮಾಲಿನಿ ಪಾಟೀಲ, ಇಂದುಮತಿ ಸಾಲಿಮಠ ಸೇರಿ ಬಿಲ್‌ಕೆರೂರ ಮತ್ತಿತರ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮುತ್ತೈದೆಯರಿಗೆ ಮಹಿಳೆಯರು ಉಡಿ ತುಂಬಿದರು. ಬೇವೂರಿನ ಮಲ್ಲಮ್ಮ ತುರಡಗಿ ಹಾಗೂ ಬಂಧುಗಳು ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ಸೇವೆ ಮಾಡಿದರು.

Leave a Reply

Your email address will not be published. Required fields are marked *