ಬೆಂಗಳೂರು: ಅಕ್ರಮ-ಸಕ್ರಮಕ್ಕಾಗಿ ಬಗರ್ಹುಕುಂ ಸಮಿತಿ ಗಳನ್ನು ರಚನೆ ಮಾಡಲು ಮೀನಮೇಷ ಎಣಿಸುತ್ತಿರುವ ಶಾಸಕರಿಗೆ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದ್ದು, ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿದರೆ ಜಿಲ್ಲಾಧಿಕಾರಿಗಳ ಮೂಲಕ ಸಮಿತಿಗಳನ್ನು ಅಸ್ತಿತ್ವಕ್ಕೆ ತರುವುದಾಗಿ ಹೇಳಿದೆ. ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಅನುಕೂಲ ಕಲ್ಪಿಸಲು ಸಮಿತಿಗಳು ರಚನೆಯಾಗಬೇಕಿದೆ. ಭೂ ಒತ್ತುವರಿ ನ್ಯಾಯಾಲಯಗಳು ಸಹ ಸರ್ಕಾರಕ್ಕೆ ಪದೇಪದೆ ಎಚ್ಚರಿಕೆ ನೀಡುತ್ತಿವೆ.
ಬಗರ್ಹುಕುಂ ಸಮಿತಿಗಳು ರಚನೆಯಾಗಿ, ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿದರೆ ರೈತರಿಗೆ ಸುಮಾರು 40 ಲಕ್ಷ ಎಕರೆ ಭೂಮಿ ಲಭ್ಯವಾಗುವ ಅಂದಾಜಿದೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಹೊಸದಾಗಿ ಫಾರಂ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರು. ಅರ್ಜಿಗಳನ್ನು ವಿಲೇವಾರಿ ಮಾಡಬೇಕಾದರೆ ಕಡ್ಡಾಯವಾಗಿ ಆಯಾ ತಾಲೂಕುಗಳಲ್ಲಿ ಶಾಸಕರ ನೇತೃತ್ವದಲ್ಲಿ ಬಗರ್ಹುಕುಂ ಸಮಿತಿಗಳಿರಬೇಕು. ಬಿ.ಎಸ್. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಹೊಸದಾಗಿ ಸಮಿತಿಗಳನ್ನು ರಚಿಸಬೇಕಾಗಿದೆ.
ಡಿಸಿಗಳಿಗೆ ಅಧಿಕಾರ: ಯಾವ ಶಾಸಕರು ಹೆಸರುಗಳನ್ನು ಕಳುಹಿಸುವುದಿಲ್ಲವೊ ಅಂತಹ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳಿಂದಲೇ ಪಟ್ಟಿ ತರಿಸಿಕೊಂಡು ಸಮಿತಿಗಳನ್ನು ರಚನೆ ಮಾಡಲು ಸರ್ಕಾರ ನಿರ್ಧರಿಸಿದೆ. ಆ ಎಚ್ಚರಿಕೆಯನ್ನು ಸಹ ಶಾಸಕರಿಗೆ ಈಗಾಗಲೇ ನೀಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ಖಚಿತಪಡಿಸಿವೆ. ಈ ತಿಂಗಳ ಅಂತ್ಯದೊಳಗೆ ಸಮಿತಿಗಳನ್ನು ರಚನೆ ಮಾಡಿ ನ್ಯಾಯಾಲಯಕ್ಕೂ ತಿಳಿಸಬೇಕಾಗಿರುವ ಕಾರಣ ಮತ್ತೊಮ್ಮೆ ಶಾಸಕರನ್ನು ಸಂರ್ಪಸಿ ಹೆಸರುಗಳನ್ನು ನೀಡುವಂತೆ ಅಥವಾ ನೇರವಾಗಿ ತಾವೇ ಪಟ್ಟಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಏನೇನು ತಿದ್ದುಪಡಿ: ಹಿಂದೆ ಗೋಮಾಳ ಜಮೀನಿನ ವಿಲೇವಾರಿಗೆ ಒಂದು ಅವಧಿಗೆ ಅವಕಾಶ ನೀಡಲಾಗಿತ್ತು. ಆದರೆ, ಹೊಸದಾಗಿ ಸಾಗುವಳಿ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿದೆ. ಇದರ ಜತೆಗೆ ನಗರ ಹಾಗೂ ಪಟ್ಟಣದ ಹೊರವಲಯಗಳಲ್ಲಿ ಅಕ್ರಮ ಸಾಗುವಳಿ ಸಕ್ರಮಕ್ಕೆ ಕೆಲ ನಿರ್ಬಂಧವಿದೆ. ಅದನ್ನು ತೆರವು ಮಾಡಬೇಕು ಎಂಬ ಬೇಡಿಕೆ ಇದೆ. ರಿಯಲ್ ಎಸ್ಟೇಟ್ ಮಾಫಿಯಾ ದುರುಪಯೋಗ ಪಡೆಯುತ್ತದೆ ಎಂಬ ಕಾರಣಕ್ಕೆ ಬಿಬಿಎಂಪಿಯಿಂದ 18 ಕಿ.ಮೀ., ಪಾಲಿಕೆಗಳಿಂದ 10 ಕಿ.ಮೀ., ನಗರಸಭೆಯಿಂದ 5 ಕಿ.ಮೀ. ಹಾಗೂ ಪುರಸಭೆಗಳಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸಕ್ರಮಕ್ಕೆ ಅವಕಾಶ ಇರಲಿಲ್ಲ. ಆದರೆ, ಇದರಿಂದ ಅರ್ಹ ಸಣ್ಣ ರೈತರಿಗೆ ತೊಂದರೆ ಯಾಗುತ್ತಿರುವುದರಿಂದ ಕಾಯ್ದೆ ತಿದ್ದುಪಡಿಗೆ ಒತ್ತಡಗಳಿವೆ. ಆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದೆ. ಈ ವ್ಯಾಪ್ತಿಯನ್ನು ತಗ್ಗಿಸಲು ತಿದ್ದುಪಡಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಶಾಸಕರಿಗೆ ಪತ್ರ: ತಾಲೂಕುಗಳಲ್ಲಿ ಬಗರ್ಹುಕುಂ ಸಮಿತಿಗಳನ್ನು ರಚನೆ ಮಾಡಲು ಹೆಸರು ನೀಡುವಂತೆ ಕಂದಾಯ ಸಚಿವ ಆರ್. ಅಶೋಕ್ ಎಲ್ಲ ಶಾಸಕರಿಗೂ ಪತ್ರ ಬರೆದಿದ್ದಾರೆ. ಈ ಬಳಿಕ ಸಮಿತಿಗಳಿಗೆ ಶಿಫಾರಸು ಮಾಡಿರುವ ಶಾಸಕರ ಸಂಖ್ಯೆ 54 ದಾಟಿಲ್ಲ. ಈ ತಾಲೂಕುಗಳಲ್ಲಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. 231 ತಾಲೂಕುಗಳಲ್ಲಿ ಸಮಿತಿಗಳಾಗಬೇಕಿದೆ.
2 ಲಕ್ಷ ಹೊಸ ಅರ್ಜಿ: ನಮೂನೆ 57ರಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ 2 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಹಿಂದೆ ತಿರಸ್ಕೃತ ಅಗಿದ್ದ ಹಾಗೂ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳನ್ನು ಸಮಿತಿಗಳು ಇತ್ಯರ್ಥ ಮಾಡಬೇಕಾಗಿದೆ. ಎಲ್ಲವೂ ಆದಲ್ಲಿ 40 ಲಕ್ಷ ಎಕರೆ ಭೂಮಿ ರೈತರಿಗೆ ಸಿಗಲಿದೆ. ಇಲಾಖೆಗಳ ಸಮಸ್ಯೆ: ಕಂದಾಯ ಹಾಗೂ ಅರಣ್ಯ ಇಲಾಖೆ ನಡುವಿನ ಸಮಸ್ಯೆ ಇತ್ಯರ್ಥಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ.
ಕಾಯ್ದೆಗೆ ತಿದ್ದುಪಡಿ: ಬಗರ್ಹುಕುಂ ಸಾಗುವಳಿಯಲ್ಲಿ ಹೆಚ್ಚಿನ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭೂ ಕಂದಾಯ ಕಾಯ್ದೆಗೆ ಎರಡು ತಿದ್ದುಪಡಿಗಳಾಗಬೇಕೆಂದು ರೈತರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ಆ ನಿಟ್ಟಿನಲ್ಲಿ ಗಂಭೀರ ಪರಿಶೀಲನೆ ನಡೆದಿದೆ. ಮುಂದಿನ ಬಜೆಟ್ ಅಧಿವೇಶನ ಅಥವಾ ಆ ನಂತರ ಬರುವ ಅಧಿವೇಶನದಲ್ಲಿ ತಿದ್ದುಪಡಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸರ್ಕಾರ ಬಗರ್ಹುಕುಂ ಸಮಿತಿಗಳನ್ನು ಬೇಗ ರಚನೆ ಮಾಡಬೇಕು ಹಾಗೂ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿಗಳನ್ನು ತರಬೇಕಾಗಿದೆ. ಅರಣ್ಯ ಭೂಮಿ ಸಮಸ್ಯೆಗೂ ಪರಿಹಾರ ಬೇಕು. ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ.
| ಜೆ.ಸಿ. ಬಯ್ಯಾರೆಡ್ಡಿ
ಅಧ್ಯಕ್ಷರು, ಪ್ರಾಂತ ರೈತ ಸಂಘ
ಎಲ್ಲ ಶಾಸಕರಿಗೂ ಪತ್ರ ಬರೆಯಲಾಗಿದೆ. ಯಾವ ಶಾಸಕರು ಹೆಸರು ಕಳುಹಿಸುವುದಿಲ್ಲವೋ ಅಂತಹ ಕಡೆ ಜಿಲ್ಲಾಧಿಕಾರಿಗಳಿಂದ ಹೆಸರು ಪಡೆಯಲಾಗುತ್ತದೆ. ರೈತರಿಗೆ ಆದಷ್ಟು ಶೀಘ್ರ ನ್ಯಾಯ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶ.
| ಆರ್. ಅಶೋಕ್ ಕಂದಾಯ ಸಚಿವ
ರುದ್ರಣ್ಣ ಹರ್ತಿಕೋಟೆ